ಡೆತ್ ನೋಟ್ ವಿಡಿಯೋ ಎಫೆಕ್ಟ್; ಪಂಜಾಬ್ ಸಚಿವ ಲಾಲ್ಜಿತ್ ಸಿಂಗ್ ಭುಲ್ಲರ್ ರಾಜೀನಾಮೆ!

ಪಂಜಾಬ್: ರಾಜಕಾರಣದಲ್ಲಿ ದೊಡ್ಡ ಮಟ್ಟದ ಸಂಚಲನ ಮೂಡಿಸಿರುವ ಅಧಿಕಾರಿಯೊಬ್ಬರ ಆತ್ಮಹತ್ಯೆ ಪ್ರಕರಣ ವಿಚಾರವಾಗಿ ಸಾರಿಗೆ ಸಚಿವ ಲಾಲ್ಜಿತ್ ಸಿಂಗ್ ಭುಲ್ಲರ್ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅಮೃತಸರದ ಗೋದಾಮು ನಿಗಮದ ಜಿಲ್ಲಾ ವ್ಯವಸ್ಥಾಪಕ ಗಗನ್‌ದೀಪ್ ಸಿಂಗ್ ರಾಂಧವ ಅವರು ವಿಷಕಾರಿ ವಸ್ತು ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದು, ಸಾವಿಗೂ ಮುನ್ನ ಮಾಡಿದ್ದ ವಿಡಿಯೋದಲ್ಲಿ ಸಚಿವ ಭುಲ್ಲರ್ ಹೆಸರನ್ನು ಉಲ್ಲೇಖಿಸಿದ್ದರು. ಈ ಪ್ರಕರಣದ ನಿಷ್ಪಕ್ಷಪಾತ ತನಿಖೆಗಾಗಿ ಮುಖ್ಯಮಂತ್ರಿ ಭಗವಂತ್ ಮಾನ್ ಅವರು ಸಚಿವರ ರಾಜೀನಾಮೆ ಕೇಳಿದ್ದು, ಭುಲ್ಲರ್ ತಮ್ಮ ಸ್ಥಾನದಿಂದ ಕೆಳಗಿಳಿದಿದ್ದಾರೆ.
ಈ ಘಟನೆಯ ಕುರಿತು ವಿರೋಧ ಪಕ್ಷದ ನಾಯಕ ಬಿಕ್ರಮ್ ಸಿಂಗ್ ಮಜಿಥಿಯಾ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಅಧಿಕಾರಿ ರಾಂಧವ ಅವರಿಗೆ 10 ಲಕ್ಷ ರೂಪಾಯಿ ಲಂಚ ಸ್ವೀಕರಿಸಲು ಮತ್ತು ಸಚಿವರ ಸಹಾಯಕರಿಗೆ ಟೆಂಡರ್ ನೀಡಲು ಒತ್ತಡ ಹೇರಲಾಗಿತ್ತು ಎಂದು ದೂರಿದ್ದಾರೆ. ಆದರೆ, ಅಧಿಕಾರಿ ಕಾನೂನುಬದ್ಧ ಬಿಡ್‌ದಾರರನ್ನು ಆಯ್ಕೆ ಮಾಡಿದ್ದಕ್ಕೆ ಸಚಿವರ ಸ್ಥಳಕ್ಕೆ ಕರೆಸಿ ಹಲ್ಲೆ ನಡೆಸಿ, ವಿಡಿಯೋ ರೆಕಾರ್ಡ್ ಮಾಡಲು ಸಂಚು ರೂಪಿಸಲಾಗಿತ್ತು ಎಂಬ ಆಘಾತಕಾರಿ ಅಂಶಗಳು ಕೇಳಿಬಂದಿವೆ.
ಆರೋಪಗಳನ್ನು ನಿರಾಕರಿಸಿರುವ ಸಚಿವ ಲಾಲ್ಜಿತ್ ಸಿಂಗ್ ಭುಲ್ಲರ್, ಇವೆಲ್ಲವೂ ಆಧಾರರಹಿತ ಎಂದು ಸ್ಪಷ್ಟಪಡಿಸಿದ್ದಾರೆ. “ನಮ್ಮ ಪಕ್ಷವು ಯಾವಾಗಲೂ ಸತ್ಯದ ಪರವಾಗಿ ನಿಲ್ಲುತ್ತದೆ. ನನ್ನ ಮೇಲಿನ ಆರೋಪಗಳ ಬಗ್ಗೆ ಮುಕ್ತ ತನಿಖೆಯಾಗಲಿ ಎಂಬ ಕಾರಣಕ್ಕೆ ನಾನು ಸ್ವತಃ ರಾಜೀನಾಮೆ ನೀಡುತ್ತಿದ್ದೇನೆ” ಎಂದು ಅವರು ಫೇಸ್‌ಬುಕ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ. ಸದ್ಯ ತನಿಖೆ ಪೂರ್ಣಗೊಳ್ಳುವವರೆಗೆ ಸಚಿವ ಸ್ಥಾನದಿಂದ ದೂರವಿರಲು ನಿರ್ಧರಿಸಿದ್ದಾರೆ.




