ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ರಿಲೀಸ್? ಸುರ್ಜೇವಾಲಾ ನೀಡಿದ ಬಿಗ್ ಅಪ್ಡೇಟ್!

ದಾವಣಗೆರೆ: ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ಉಪಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಕುರಿತು ಕಾಂಗ್ರೆಸ್ ಹೈಕಮಾಂಡ್ ತೀವ್ರ ಕಸರತ್ತು ನಡೆಸುತ್ತಿದ್ದು, ಇಂದು ಸಂಜೆ ಅಥವಾ ನಾಳೆ ಬೆಳಿಗ್ಗೆಯೊಳಗೆ ಅಧಿಕೃತ ಪಟ್ಟಿ ಬಿಡುಗಡೆಯಾಗಲಿದೆ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ತಿಳಿಸಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ನಡೆದ ಸಭೆಯ ಬಳಿಕ ಮಾತನಾಡಿದ ಅವರು, ಶುಕ್ರವಾರ ತಡರಾತ್ರಿಯವರೆಗೆ ಅಭ್ಯರ್ಥಿಗಳ ಆಯ್ಕೆ ಕುರಿತು ಸುದೀರ್ಘ ಚರ್ಚೆ ನಡೆಸಲಾಗಿದೆ. ಪ್ರತಿಯೊಬ್ಬ ಕಾರ್ಯಕರ್ತರ ಅಭಿಪ್ರಾಯ ಮತ್ತು ಅಪಸ್ವರಗಳನ್ನು ಗಂಭೀರವಾಗಿ ಪರಿಗಣಿಸಿಯೇ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದರು.
ರಾಜ್ಯಸಭಾ ಸದಸ್ಯ ನಾಸೀರ್ ಹುಸೇನ್ ಪ್ರತಿಕ್ರಿಯಿಸಿ , ಟಿಕೆಟ್ ಆಕಾಂಕ್ಷಿಗಳು ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್, ರಣದೀಪ್ ಸುರ್ಜೇವಾಲಾ ಮತ್ತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿ ತಮ್ಮ ಹಕ್ಕು ಮಂಡಿಸಿದ್ದಾರೆ . ಎಲ್ಲಾ ಸಮುದಾಯದ ನಾಯಕರು ತಮ್ಮ ಪ್ರತಿನಿಧಿಗಳಿಗೆ ಟಿಕೆಟ್ ನೀಡುವಂತೆ ಲಾಬಿ ನಡೆಸುತ್ತಿದ್ದು, ವೀಕ್ಷಕರು ನೀಡಿದ ಸರ್ವೇ ವರದಿ ಹಾಗೂ ಸ್ಥಳೀಯ ಅಭಿಪ್ರಾಯಗಳನ್ನು ಆಧರಿಸಿ ಹೈಕಮಾಂಡ್ ಅಭ್ಯರ್ಥಿಗಳನ್ನು ಅಂತಿಮಗೊಳಿಸಲಿದೆ. ಗೆಲ್ಲುವ ಕುದುರೆಗೆ ಮಾತ್ರ ಮಣೆ ಹಾಕಲಾಗುವುದು ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ .
ದಾವಣಗೆರೆಯಲ್ಲಿ ಶಾಮನೂರು ಕುಟುಂಬದ ಹಿಡಿತದ ನಡುವೆ ಮುಸ್ಲಿಂ ಸಮುದಾಯದ ನಾಯಕರು ಟಿಕೆಟ್ಗಾಗಿ ಪ್ರಬಲ ಪೈಪೋಟಿ ನಡೆಸುತ್ತಿರುವುದು ಈ ಬಾರಿಯ ವಿಶೇಷವಾಗಿದೆ. ಬಾಗಲಕೋಟೆಯಲ್ಲೂ ಆಕಾಂಕ್ಷಿಗಳ ದಂಡೇ ಇರುವುದರಿಂದ ಕಾಂಗ್ರೆಸ್ ವರಿಷ್ಠರು ಬಂಡಾಯ ಏಳದಂತೆ ಸಮತೋಲನ ಕಾಯ್ದುಕೊಳ್ಳಲು ಹರಸಾಹಸ ಪಡುತ್ತಿದ್ದಾರೆ. ಅಭ್ಯರ್ಥಿಗಳ ಪಟ್ಟಿ ಘೋಷಣೆಯಾದ ಬಳಿಕ ಜಿಲ್ಲಾ ರಾಜಕಾರಣದಲ್ಲಿ ಯಾವ ರೀತಿಯ ಬದಲಾವಣೆಗಳಾಗಲಿವೆ ಎಂಬುದು ಕುತೂಹಲ ಮೂಡಿಸಿದೆ.




