ಮಳೆರಾಜ್ಯಸುದ್ದಿ

ರಾಜ್ಯದ 15 ಜಿಲ್ಲೆಗಳಲ್ಲಿ ಬೇಸಿಗೆ ಮಳೆ ಅವಾಂತರ: ಆಲಿಕಲ್ಲು ಮಳೆಯ ಅಬ್ಬರಕ್ಕೆ ಬೆಳೆ ನಾಶ

ರಾಜ್ಯದ ವಿವಿಧ ಭಾಗಗಳಲ್ಲಿ ಅಕಾಲಿಕ ಬೇಸಿಗೆ ಮಳೆ ಭಾರೀ ಅವಾಂತರ ಸೃಷ್ಟಿಸಿದೆ. ಸುಮಾರು 15ಕ್ಕೂ ಹೆಚ್ಚು ಜಿಲ್ಲೆಗಳು ವರುಣನ ಆರ್ಭಟಕ್ಕೆ ತತ್ತರಿಸಿದ್ದು, ಆಲಿಕಲ್ಲು ಮಳೆಯ ಪರಿಣಾಮ ರೈತರಿಗೆ ದೊಡ್ಡ ಹೊಡೆತ ಬಿದ್ದಿದೆ.

ಅನೇಕ ಕಡೆಗಳಲ್ಲಿ ಸುರಿದ ಆಲಿಕಲ್ಲು ಮಳೆಯಿಂದ ಬಾಳೆ, ತೆಂಗು, ಮಾವು ಹಾಗೂ ಅಡಕೆ ಬೆಳೆಗಳು ಅಪಾರ ಪ್ರಮಾಣದಲ್ಲಿ ಹಾನಿಗೀಡಾಗಿವೆ. ಹೊಲಗಳಲ್ಲಿ ಬೆಳೆಗಳು ಸಂಪೂರ್ಣ ನೆಲಕ್ಕುರುಳಿದ ದೃಶ್ಯ ರೈತರ ಕಳವಳ ಹೆಚ್ಚಿಸಿದೆ.

ಕೆಲವು ಪ್ರದೇಶಗಳಲ್ಲಿ ರಾಶಿ ರಾಶಿಯಾಗಿ ಬಿದ್ದ ಆಲಿಕಲ್ಲುಗಳನ್ನು ನೋಡಿ ಜನರು ನಿಬ್ಬೆರಗಾಗಿದ್ದಾರೆ. ರಸ್ತೆ, ಮನೆಗಳ ಮುಂಭಾಗ ಎಲ್ಲೆಡೆ ಹಿಮದಂತೆ ಆಲಿಕಲ್ಲುಗಳು ಹರಡಿಕೊಂಡಿದ್ದು, ಅಪರೂಪದ ದೃಶ್ಯ ಕಂಡುಬಂದಿದೆ.

ಬೆಂಗಳೂರಿನಲ್ಲೂ ಅಕಾಲಿಕ ಮಳೆ ಜನಜೀವನ ಅಸ್ತವ್ಯಸ್ತಗೊಳಿಸಿದೆ. ವಿಶೇಷವಾಗಿ ಯಲಹಂಕದ ಬಾಗಲೂರು–ಕಂಟ್ರಿ ಕ್ಲಬ್ ಸಮೀಪದ ರಸ್ತೆಯಲ್ಲಿ ಆಲಿಕಲ್ಲು ಮಳೆ ಸುರಿದ ಪರಿಣಾಮ ರಸ್ತೆಗಳು ಕಾಶ್ಮೀರದ ಹಿಮದ ದೃಶ್ಯವನ್ನು ನೆನಪಿಸಿವೆ.

ಹವಾಮಾನ ವೈಪರೀತ್ಯವೇ ಈ ಸಡನ್‌ ಮಳೆಯ ಪ್ರಮುಖ ಕಾರಣ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಮಳೆಯ ಸಾಧ್ಯತೆ ಇರುವುದರಿಂದ ರೈತರು ಹಾಗೂ ಸಾರ್ವಜನಿಕರು ಎಚ್ಚರಿಕೆಯಿಂದ ಇರಲು ಹವಾಮಾನ ಇಲಾಖೆ ಸೂಚಿಸಿದೆ.

ಒಟ್ಟಿನಲ್ಲಿ, ಅಕಾಲಿಕ ಮಳೆ ಹಾಗೂ ಆಲಿಕಲ್ಲು ಮಳೆಯ ಅಬ್ಬರ ರಾಜ್ಯದ ಕೃಷಿ ಹಾಗೂ ಸಾಮಾನ್ಯ ಜೀವನಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿದೆ.

Comments (0)

Your email address will not be published. Required fields are marked *

Back to top button