
ಸಿ.ವಿ. ಷಣ್ಮುಗಂ ಅವರು ನಟಿ ನಯನತಾರಾ ಕುರಿತು ನೀಡಿದ ಅವಹೇಳನಕಾರಿ ಹೇಳಿಕೆ ತಮಿಳುನಾಡು ಸೇರಿದಂತೆ ದೇಶದಾದ್ಯಂತ ಭಾರಿ ವಿವಾದಕ್ಕೆ ಕಾರಣವಾಗಿದೆ. ಮಹಿಳೆಯರ ಸುರಕ್ಷತೆ ಕುರಿತ ಪ್ರತಿಭಟನೆ ಸಂದರ್ಭದಲ್ಲಿ ಈ ಹೇಳಿಕೆ ನೀಡಿರುವುದು ಸಾರ್ವಜನಿಕರ ಆಕ್ರೋಶವನ್ನು ಮತ್ತಷ್ಟು ಉಕ್ಕಿಸಿದೆ.
ಘಟನೆಯ ಹಿನ್ನೆಲೆವಾಗಿ, ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಜನರಿಗೆ ತಮ್ಮ ಕನಸುಗಳನ್ನು ಹಂಚಿಕೊಳ್ಳುವಂತೆ ಕರೆ ನೀಡಿದ್ದನ್ನು ಟೀಕಿಸುವ ವೇಳೆ, ಷಣ್ಮುಗಂ ಅವರು ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಅವರ ಹೆಸರನ್ನು ಉಲ್ಲೇಖಿಸಿ ಅಸಭ್ಯ ಉದಾಹರಣೆ ನೀಡಿದ್ದಾರೆ.
“ನನಗೆ ನಯನತಾರಾ ಜೊತೆ ಮದುವೆಯಾಗಬೇಕೆಂಬ ಕನಸಿದ್ದರೆ, ಸ್ಟಾಲಿನ್ ಅದನ್ನು ಈಡೇರಿಸುತ್ತಾರಾ?” ಎಂಬ ಹೇಳಿಕೆ ನೀಡಿದ ಷಣ್ಮುಗಂ ಅವರ ಮಾತುಗಳು ವ್ಯಾಪಕ ಟೀಕೆಗೆ ಗುರಿಯಾಗಿದೆ. ಈ ವೇಳೆ ಇತರ ನಾಯಕರು ನಗುತ್ತಾ ಬೆಂಬಲ ಸೂಚಿಸಿದ್ದೂ ವಿವಾದವನ್ನು ಮತ್ತಷ್ಟು ಗಂಭೀರಗೊಳಿಸಿದೆ.
ಈ ಬಗ್ಗೆ ದಕ್ಷಿಣ ಭಾರತ ಚಲನಚಿತ್ರ ಕಲಾವಿದರ ಸಂಘ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, “ಸಂಸದೀಯ ಘನತೆಯನ್ನು ಕಾಪಾಡಿಕೊಳ್ಳದೇ ನಟಿಯ ಬಗ್ಗೆ ಹಗುರವಾಗಿ ಮಾತನಾಡಿರುವುದು ನಾಚಿಕೆಗೇಡಿನ ಸಂಗತಿ” ಎಂದು ಹೇಳಿದೆ.
ಸಂಘವು ಷಣ್ಮುಗಂ ಅವರಿಗೆ ತಕ್ಷಣ ಬೇಷರತ್ ಕ್ಷಮೆಯಾಚನೆ ಮಾಡಬೇಕೆಂದು ಆಗ್ರಹಿಸಿ, ಸಾರ್ವಜನಿಕ ಪ್ರತಿನಿಧಿಗಳು ತಮ್ಮ ಮಾತುಗಳಲ್ಲಿ ಸಂಯಮ ಮತ್ತು ಗೌರವ ಕಾಪಾಡಿಕೊಳ್ಳಬೇಕೆಂದು ಎಚ್ಚರಿಸಿದೆ.




