Freedom TV

ಶಾಮನೂರು ಶಿವಶಂಕರಪ್ಪ ಉತ್ತರಾಧಿಕಾರಿ ಯಾರು? ಟಿಕೆಟ್ ಘೋಷಣೆಗೂ ಮುನ್ನವೇ ಪ್ರಚಾರ ಶುರು ಮಾಡಿದ ಸಚಿವರ ಪುತ್ರ..!

ದಾವಣಗೆರೆ: ಜಿಲ್ಲೆಯ ರಾಜಕೀಯ ಭದ್ರಕೋಟೆ ಎಂದೇ ಕರೆಸಿಕೊಳ್ಳುವ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ದಿನಾಂಕ ಘೋಷಣೆಯಾಗಿದ್ದು (ಏಪ್ರಿಲ್ 9), ಟಿಕೆಟ್ ಫೈಟ್ ಈಗ ರಂಗೇರಿದೆ. ಶಾಮನೂರು ಶಿವಶಂಕರಪ್ಪ ಅವರ ನಿಧನದಿಂದ ತೆರವಾದ ಈ ಸ್ಥಾನವನ್ನು ಉಳಿಸಿಕೊಳ್ಳಲು ಕಾಂಗ್ರೆಸ್ ಸಜ್ಜಾಗಿದ್ದು, ಶಾಮನೂರು ಕುಟುಂಬದ ಮೂರನೇ ತಲೆಮಾರಿನ ನಾಯಕ ಸಮರ್ಥ್ ಶಾಮನೂರು ಅವರ ಹೆಸರು ಮುಂಚೂಣಿಯಲ್ಲಿದೆ.

ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರ ಪುತ್ರರಾದ ಸಮರ್ಥ್ ಶಾಮನೂರು ಅವರಿಗೆ ಟಿಕೆಟ್ ನೀಡಬೇಕೆಂದು ಕ್ಷೇತ್ರದಾದ್ಯಂತ ಬೆಂಬಲಿಗರು ಒತ್ತಾಯಿಸುತ್ತಿದ್ದಾರೆ. ಈಗಾಗಲೇ ಸಮರ್ಥ್ ಅವರು ಕ್ಷೇತ್ರದಲ್ಲಿ ಸಕ್ರಿಯರಾಗಿದ್ದು, ಯುವ ಸಮೂಹವನ್ನು ಸೆಳೆಯುವಲ್ಲಿ ಯಶಸ್ವಿಯಾಗುತ್ತಿದ್ದಾರೆ. ತಂದೆ ಮಲ್ಲಿಕಾರ್ಜುನ್ ದಾವಣಗೆರೆ ಉತ್ತರ ಶಾಸಕರಾಗಿದ್ದರೆ, ತಾಯಿ ಪ್ರಭಾ ಮಲ್ಲಿಕಾರ್ಜುನ್ ಸಂಸದೆಯಾಗಿದ್ದಾರೆ. ಈಗ ಮಗನನ್ನೂ ರಾಜಕೀಯಕ್ಕೆ ತರಲು ಕುಟುಂಬ ಉತ್ಸುಕವಾಗಿದೆ.

ದಾವಣಗೆರೆ ದಕ್ಷಿಣದಲ್ಲಿ ಮುಸ್ಲಿಂ ಮತದಾರರು ನಿರ್ಣಾಯಕ ಸಂಖ್ಯೆಯಲ್ಲಿದ್ದಾರೆ. ಹೀಗಾಗಿ ಈ ಬಾರಿ ಅಲ್ಪಸಂಖ್ಯಾತ ಸಮುದಾಯದ ಅಭ್ಯರ್ಥಿಗೆ ಟಿಕೆಟ್ ನೀಡಬೇಕೆಂದು ಸಚಿವ ಜಮೀರ್ ಅಹ್ಮದ್ ಖಾನ್ ಬೆಂಬಲಿತ ತಂಡ ಮತ್ತು ಸ್ಥಳೀಯ ಮುಸ್ಲಿಂ ನಾಯಕರು ಆಗ್ರಹಿಸಿದ್ದಾರೆ.

ಕಾಂಗ್ರೆಸ್‌ನಲ್ಲಿನ ಈ ಆಂತರಿಕ ಭಿನ್ನಮತವನ್ನು ಬಳಸಿಕೊಳ್ಳಲು ಬಿಜೆಪಿ ಹೊಂಚು ಹಾಕುತ್ತಿದ್ದು, ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಸಿದ್ಧತೆ ನಡೆಸುತ್ತಿದೆ.

ಶಾಮನೂರು ಶಿವಶಂಕರಪ್ಪ ಅವರ ಮೇಲಿದ್ದ ಅಪಾರ ಗೌರವ ಮತ್ತು ಸಚಿವ ಮಲ್ಲಿಕಾರ್ಜುನ್ ಅವರ ಅಭಿವೃದ್ಧಿ ಕೆಲಸಗಳು ಸಮರ್ಥ್ ಅವರಿಗೆ ಪ್ಲಸ್ ಪಾಯಿಂಟ್ ಆಗಲಿವೆ. ಆದರೆ, ‘ಒಂದೇ ಕುಟುಂಬಕ್ಕೆ ಎಷ್ಟು ಟಿಕೆಟ್?’ ಎಂಬ ವಿರೋಧ ಪಕ್ಷಗಳ ಟೀಕೆ ಮತ್ತು ಅಲ್ಪಸಂಖ್ಯಾತರ ಅಸಮಾಧಾನವನ್ನು ಶಮನಗೊಳಿಸುವುದು ಕಾಂಗ್ರೆಸ್ ಹೈಕಮಾಂಡ್‌ಗೆ ಸವಾಲಾಗಿದೆ.

Comments (0)

Your email address will not be published. Required fields are marked *

Back to top button