
ಯಲಹಂಕ ವಿಧಾನಸಭಾ ಕ್ಷೇತ್ರದ ಶಾಸಕ ಮತ್ತು ಅವರ ಕುಟುಂಬದ ಸದಸ್ಯರ ವಿರುದ್ಧ ಫೇಸ್ಬುಕ್ನಲ್ಲಿ ಅಶ್ಲೀಲ ಪದಬಳಕೆ ಹಾಗೂ ನಿಂದನೆ ಮಾಡಿರುವ ಆರೋಪದ ಮೇಲೆ ಬೆಂಗಳೂರಿನ ಈಶಾನ್ಯ ವಿಭಾಗದ ಸೆನ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಶಾಸಕರು ಮತ್ತು ಕುಟುಂಬದವರ ಫೋಟೋಗಳನ್ನು ಬಳಸಿ, ಅತ್ಯಂತ ಕೆಟ್ಟ ಶಬ್ದಗಳಿಂದ ನಿಂದಿಸಿರುವ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣಕ್ಕೆ ಅಪ್ಲೋಡ್ ಮಾಡುವ ಮೂಲಕ ಅವರ ಗೌರವಕ್ಕೆ ಚ್ಯುತಿ ತರಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
‘ಕಬ್ಬಾಳಮ್ಮ ಭಾಗ್ಯ’ ಹೆಸರಿನ ಫೇಸ್ಬುಕ್ ಪೇಜ್ನಿಂದ ಈ ವಿಡಿಯೋವನ್ನು ಅಪ್ಲೋಡ್ ಮಾಡಲಾಗಿದ್ದು, ಅದನ್ನು ‘Yalahankabjp’ ಅಧಿಕೃತ ಪುಟಕ್ಕೆ ಟ್ಯಾಗ್ ಮಾಡಲಾಗಿತ್ತು. ಈ ಪೋಸ್ಟ್ನ ಅಡಿಯಲ್ಲಿ ಇತರ ಕೆಲವು ಅಕೌಂಟ್ಗಳಿಂದಲೂ ಶಾಸಕರ ವಿರುದ್ಧ ಅಶ್ಲೀಲ ಕಾಮೆಂಟ್ಗಳನ್ನು ಮಾಡಿ ನಿಂದಿಸಲಾಗಿತ್ತು. ಈ ವಿಚಾರವು ಶಾಸಕರ ಗಮನಕ್ಕೆ ಬಂದ ತಕ್ಷಣ, ಅವರ ಬೆಂಬಲಿಗ ಮಹೇಶ್ ಎಂಬುವವರು ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ.
ಶಾಸಕರ ಕುಟುಂಬದವರನ್ನು ಗುರಿಯಾಗಿಸಿಕೊಂಡು ನಡೆಸಿರುವ ಈ ಸೈಬರ್ ದಾಳಿಯು ರಾಜಕೀಯ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಸದ್ಯ ಪೊಲೀಸರು ಐಟಿ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದು, ವಿಡಿಯೋ ಅಪ್ಲೋಡ್ ಮಾಡಿರುವ ಮೂಲ ವ್ಯಕ್ತಿ ಹಾಗೂ ಅದಕ್ಕೆ ಅಶ್ಲೀಲ ಕಾಮೆಂಟ್ ಮಾಡಿರುವ ಇತರರ ಪತ್ತೆಗಾಗಿ ತನಿಖೆ ಆರಂಭಿಸಿದ್ದಾರೆ. ಫೇಸ್ಬುಕ್ ಸಂಸ್ಥೆಯೊಂದಿಗೂ ಸಂಪರ್ಕ ಸಾಧಿಸಿರುವ ಪೊಲೀಸರು, ಆಕ್ಷೇಪಾರ್ಹ ಪೋಸ್ಟ್ ಡಿಲೀಟ್ ಮಾಡಲು ಮತ್ತು ಆರೋಪಿಗಳ ಐಪಿ ವಿಳಾಸ ಪತ್ತೆಹಚ್ಚಲು ಮುಂದಾಗಿದ್ದಾರೆ.




