ಲವ್ ಮಾಕ್ಟೇಲ್3: ‘ಮುದ್ದು ಮಗಳೇ’ ಲಿರಿಕಲ್ ವೀಡಿಯೋ ಸಾಂಗ್ ಬಿಡುಗಡೆ!

ಡಾರ್ಲಿಂಗ್ ಕೃಷ್ಣ ನಟಿಸಿ, ನಿರ್ದೇಶನ ಮಾಡಿರುವ ಲವ್ ಮಾಕ್ಟೇಲ್೩ ಚಿತ್ರ ಮಾರ್ಚ್ 19ರಂದು ತೆರೆಗಾಣಲಿದೆ. ವಾರದ ಹಿಂದಷ್ಟೇ ಟ್ರೈಲರ್ ಬಿಡುಗಡೆಗೊಳಿಸಿದ್ದ ಚಿತ್ರತಂಡವೀಗ, ಬಿಡುಗಡೆಯ ದಿನಗಳು ಹತ್ತಿರದಲ್ಲಿರುವಾಗಲೇ ಮುದ್ದು ಮಗಳೇ’ ಎಂಬ ಲಿರಿಕಲ್ ವೀಡಿಯೋ ಸಾಂಗ್ ಅನ್ನು ಪ್ರೇಕ್ಷಕರ ಮುಂದಿಟ್ಟಿದೆ. ಅಪ್ಪ ಮಗಳ ಬಂಧವನ್ನು ಸಮರ್ಥವಾಗಿ ಹಿಡಿದಿಟ್ಟುಕೊಂಡಿರುವ ಸಾಹಿತ್ಯ, ಅದಕ್ಕೊಪ್ಪುವ ಸಂಗೀತದ ಮೂಲಕ ಈ ಹಾಡು ಕೇಳುಗರನ್ನು ಸೆಳೆಯವಂತಿದೆ.
ನಕ್ಕರೂ ಚೆಂದ ಅತ್ತರೂ ಚೆಂದ ಮುದ್ದಾದ ಬಂಧ ಈ ನನ್ನ ಕಂದ ಎಂಬಂಥಾ ಮಮತೆಯ ಸಾಲುಗಳಿರುವ ಈ ಹಾಡನ್ನು ಅರುಣ್ ನಾಯಕ್ ಬರೆದಿದ್ದಾರೆ. ನಕುಲ್ ಅಭಯಂಕರ್ ಸಂಗೀತವಿರುವ ಗೀತೆಗೆ ವಿಜಯ್ ಪ್ರಕಾಶ್ ಧ್ವನಿಯಾಗಿದ್ದಾರೆ. ಈಗಾಗಲೇ ಬಿಡುಗಡೆಗೊಂಡಿರುವ ಹಾಡುಗಳ ಮೂಲಕ ನಕುಲ್ ಅಭಯಂಕರ್ ಸಂಗೀತ ನಿರ್ದೇಶಕರಾಗಿ ಮೋಡಿ ಮಾಡಿದ್ದಾರೆ. ಈ ಹಾಡು ಒಟ್ಟಾರೆ ಕಥೆಯ ಸೂಕ್ಷ್ಮ ಬಿಂದುವೊಂದನ್ನು ಪ್ರೇಕ್ಷಕರಿಗೆ ದಾಟಿಸುವಂತಿದೆ.
ಕ್ರಿಸ್‌ಮಿ ಬ್ಯಾನರಿನಡಿಯಲ್ಲಿ ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಡಾರ್ಲಿಂಗ್ ಕೃಷ್ಣ, ಮಿಲನಾ ನಾಗರಾಜ್, ಸಂವೃತ, ಅಮೃತಾ ಅಯ್ಯಂಗಾರ್, ದಿಲೀಪ್ ರಾಜ್, ಶ್ವೇತಾ ಪ್ರಸಾದ್, ರಚೆಲ್ ಡೇವಿಡ್, ನಯೇರಾ, ಜಗದೀಶ್, ಅಭಿಲಾಶ್, ಗಿರಿರಾಜ್, ದಳಪತಿ ಮುಂತಾದವರ ತಾರಾಗಣ ಈ ಚಿತ್ರಕ್ಕಿದೆ. ಶ್ರೀ ಕ್ರೇಜಿ ಮೈಂಡ್ಸ್ ಛಾಯಾಗ್ರಹಣ ಮತ್ತು ಸಂಕಲನ, ನಕುಲ್ ಅಭಯಂಕರ್ ಸಂಗೀತ, ಅಮರ್ ಮತ್ತು ಜೋನಾ ಕಲಾ ನಿರ್ದೇಶನ ಈ ಚಿತ್ರಕ್ಕಿದೆ.




