Editorial

ಸಂಪಾದಕೀಯ…

ಸಿದ್ದರಾಮಯ್ಯ – ಒಂದು ಬ್ರಾಂಡ್!ಸ್ವಾಭಿಮಾನ, ಗರ್ವ, ಮನುಷ್ಯತ್ವದ ಪ್ರತೀಕ. ದೈತ್ಯ ಎದುರಾಳಿಗಳಿಗೂ ಸೆಡ್ಡುಹೊಡೆಯುವ ವ್ಯಕ್ತಿತ್ವ. ಕುರುಬ ಜಾತಿಯಲ್ಲಿ ಹುಟ್ಟಿದರೂ ಜಾತಿಯ ಹಂಗಿಲ್ಲದ ದೊಡ್ಡತನ. ಕುಟುಂಬ ರಾಜಕಾರಣದ ಪರಮ ವೈರಿ. ಕಳೆದ ಬಾರಿ ಸಿಎಂ ಆದಾಗ ಇದೇ ಅಭಿಪ್ರಾಯ ಎಲ್ಲರದ್ದೂ ಇತ್ತು.
ಆದರೆ ಎರಡನೇ ಬಾರಿ ಗದ್ದುಗೆ ಏರಿದ ನಂತರ ಚಹರೆ ಬದಲಾಯಿತು. ಸ್ವಜಾತಿ ಟೀಂ ರೆಡಿಯಾಯಿತು. ಕೆ ಬ್ರಾಂಡ್ ಅಧಿಕಾರಿಗಳಿಗೆ ಹುದ್ದೆಗಳು. ಆಡಳಿತದಲ್ಲಿ ಕಂಟ್ರೋಲ್ ತಪ್ಪಿತು. ಗ್ಯಾರಂಟಿ ಪರ ನಿಂತು ಬಜೆಟ್ಗಳನ್ನು ಜನಪರಗೊಳಿಸಲು ಹೆಣಗಾಟ.

ಕಾಂಗ್ರೆಸ್ ಗೆದ್ದಾಗ ದೆಹಲಿಯಲ್ಲಿ ಸರ್ಕಸ್ ನಡೆದಿತ್ತು. ಡಿಕೆ ಪಟ್ಟು ಬಿಡದೆ ಸುಸ್ತುಮಾಡಿದರು. ಸಿದ್ದು ಮುಖ ಕಳಾಹೀನವಾಗಿತ್ತು. ಹಳೆಯ ಶಿಷ್ಯರು, ಜನತಾ ಪರಿವಾರದ ನಾಯಕರು ಕೈ ಹಿಡಿದರು. ಕಡೆಗೆ ಸಿದ್ದು ಎರಡನೇ ಅವಧಿಗೆ ಸಿಎಂ ಆದರು. ಆಗಲೇ ಡಿಕೆಗೆ ಅರ್ಧ ಅವಧಿಗೆ ಕುರ್ಚಿ ಬಿಡುವುದಾಗಿ ಮಾತು ಕೊಟ್ಟಿದ್ದಾರೆ ಎಂದು ಹೇಳಲಾಗಿತ್ತು.
ಎರಡೂವರೆ ವರ್ಷ ಮುಗಿಯುತ್ತಿದ್ದಂತೆ ಸಿದ್ದು ಸುತ್ತ ವಚನ ಭ್ರಷ್ಟತೆಯ ಕಾರ್ಮೋಡ. ಅಧಿಕಾರ ವ್ಯಾಮೋಹ, ಪುತ್ರ ವ್ಯಾಮೋಹದ ಕಳಂಕ. ಮುಂದಿನ ಬಜೆಟ್ ನಾನೇ ಮಂಡಿಸುತ್ತೇನೆ ಎಂದು ಹೇಳಿ, ಡಿಕೆಗೆ ಅವಕಾಶ ಇಲ್ಲ ಎಂಬ ಸಂದೇಶ ಕಳುಹಿಸಿದ್ದಾರೆ ಸಿಎಂ.
ಡಿಕೆ ಶಿವಕುಮಾರ್ ಪಕ್ಷಕ್ಕಾಗಿ ಸವೆದವರು, ಹೈಕಮಾಂಡ್ ಗಾಗಿ ಜೈಲು ಸೇರಿದವರು, ಒಕ್ಕಲಿಗರನ್ನು ಸೆಳೆದವರು. ಆದರೆ ರಾಜ್ಯಭಾರದ ಕನಸು ನನಸಾಗುತ್ತಿಲ್ಲ. ಸಿದ್ದು ಪಟಾಲಂನ ಜಾರ್ಜ್, ದೇಶಪಾಂಡೆ, ಎಂಬಿ ಪಾಟೀಲ್, ಸತೀಶ ಜಾರಕಿಹೊಳಿ ಮುಂತಾದವರು ಬಿಡುತ್ತಿಲ್ಲ. ಹೈಕಮಾಂಡ್ ಬಣದ ಎಚ್ ಕೆ ಪಾಟೀಲ್, ಗುಂಡೂರಾವ್, ಹಿರಿ ಖರ್ಗೆ, ಖಂಡ್ರೆಗಳಿಗೆ ಡಿಕೆ ಅಸ್ಪಶ್ಯ.
ಇನ್ನು ಪರಮೇಶ್ವರ್, ಮುನಿಯಪ್ಪ ದಲಿತ ಸಿಎಂ ಅಸ್ತ್ರ ಬೀಸುತ್ತ ಸೆಟೆದು ನಿಂತಿದ್ದಾರೆ.
ರಮೇಶ್ ಜಾರಕಿಹೊಳಿ ಸಿಡಿ ಕೇಸ್ ಹಿನ್ನೆಲೆಯಲ್ಲಿ ಡಿಕೆ ಶಾಸಕರ ಸಿಡಿ ಮಾಡುತ್ತಾರೆ ಎಂಬ ಭಯ ಹರಡಿಸಲಾಗಿದೆ. ಅತಿ ಕರಪ್ಟ್ ಎಂಬ ಪ್ರಪೋಗಾಂಡ ಮಾಡಾಗಿದೆ. ಆದರೆ ಹೆಚ್ಚು ಹಣ ಮಾಡುವ ಮಂತ್ರಿಗಳು ಬೇರೆಯೇ ಇದ್ದಾರೆ. ಈ ಮಧ್ಯೆ ಸಿದ್ದು ಹೊಸ ವರಸೆಯಿಂದ ಡಿಕೆ ಕುಸಿದಿದ್ದಾರೆ.
ಮುಂದಿನ ಚುನಾವಣೆಗೆ ನಿನ್ನ ಸಾರಥ್ಯ, ನಿನ್ನನ್ನು ಗೆಲ್ಲಿಸುವ ಹೊಣೆ ನನ್ನದು ಎಂದು ಹೇಳಿ ಡಿಕೆ ಕಿವಿಗೆ ಭವಿಷ್ಯದ ಗುಲಾಬಿ ಇಡಲಾಗುತ್ತಿದೆ.
ಅಹಿಂದ + ಒಕ್ಕಲಿಗ ಸೂತ್ರದಡಿ ಗೆಲ್ತೇವೆ ನೆಕ್ಸ್ಟ್ ನೀನೆ ಸಿಎಂ ಎನ್ನಲಾಗ್ತಿದೆ. ಈ ಸೂತ್ರದಡಿ ಕೈ ಪಡೆ ಮತ್ತೆ ಗೆಲ್ಲಬಹುದಾ..? ಕಳೆದ ಬಾರಿ ಮೀಸಲಾತಿಗೆ ಕೈ ಹಾಕಿ ಬೊಮ್ಮಾಯಿ ಸೋತಿದ್ದರು. ಇದರಿಂದ ಪಾಠ ಕಲಿತ ಮೋದಿ ಶಾ ತಂತ್ರ ಏನಾಗಬಹುದು..? ಒಟ್ಟಿನಲ್ಲಿ ಕಾಂಗ್ರೆಸ್‌ ಹಳೇ ಹುಲಿಗಳ ಆಟದ ಮಧ್ಯೆ ಡಿಕೆಯ ಗಡ್ಡಕ್ಕೆ ಕತ್ತರಿ ಬೀಳಲು ಎಷ್ಟು ಕಾಲ ಕಾಯಬೇಕೋ..?

Comments (0)

Your email address will not be published. Required fields are marked *

Back to top button