ತಾಳಿ ಕಟ್ಟುವ ಮುನ್ನ ಪ್ರಿಯಕರನ ಜೊತೆ ವಧು ಪರಾರಿ!

ಆಂಧ್ರಪ್ರದೇಶ: ಸಿನಿಮಾಗಳಲ್ಲಿ ಮಾತ್ರ ನಡೆಯುತ್ತದೆ ಅಂದುಕೊಂಡಿದ್ದ ದೃಶ್ಯವೊಂದು ಆಂಧ್ರಪ್ರದೇಶದ ಎನ್ಟಿಆರ್ ಜಿಲ್ಲೆಯ ಮೈಲವರಂನಲ್ಲಿ ನಿಜವಾಗಿಯೂ ನಡೆದಿದೆ. ತಾಳಿ ಕಟ್ಟುವ ಶುಭ ಮುಹೂರ್ತದಲ್ಲಿ ಪ್ರಿಯಕರ ಎಂಟ್ರಿ ಕೊಟ್ಟ ಬೆನ್ನಲ್ಲೇ ವಧು ಮದುವೆ ಮಂಟಪದಿಂದ ಕೆಳಗಿಳಿದು ಆತನೊಂದಿಗೆ ಹೋಗಲು ನಿರ್ಧರಿಸಿದ್ದಾಳೆ.

ಮದುವೆ ಮಂಟಪದಲ್ಲಿ ಮಂಗಳವಾದ್ಯ ಮೊಳಗುತ್ತಿತ್ತು, ಜೀರಿಗೆ-ಬೆಲ್ಲ ಶಾಸ್ತ್ರವೂ ಮುಗಿದು ಪುರೋಹಿತರು ತಾಳಿ ಕಟ್ಟುವ ಮಂತ್ರ ಪಠಿಸುತ್ತಿದ್ದರು. ಈ ಹಂತದಲ್ಲಿ ವಧುವಿನ ಪ್ರಿಯಕರ ಮಂಟಪಕ್ಕೆ ಧಾವಿಸಿ ಬಂದಿದ್ದಾನೆ. ಆತನನ್ನು ಕಂಡ ಕೂಡಲೇ ಮದುವೆ ಪೀಠದಿಂದ ಎದ್ದ ವಧು, ‘ಬಂದ್ಯಾ…’ ಎನ್ನುತ್ತಾ ಆತನ ಬಳಿ ತೆರಳಿದ್ದಾಳೆ.
“ನಾವಿಬ್ಬರೂ ಪ್ರೀತಿಸುತ್ತಿದ್ದೇವೆ, ನನಗೆ ಈ ಮದುವೆ ಇಷ್ಟವಿಲ್ಲ” ಎಂದು ಎಲ್ಲರ ಸಮ್ಮುಖದಲ್ಲೇ ಘೋಷಿಸಿ ಸಂಬಂಧಿಕರನ್ನು ದಂಗಾಗಿಸಿದ್ದಾಳೆ.
ಈ ಅನಿರೀಕ್ಷಿತ ಘಟನೆಯಿಂದ ವರನ ಕಡೆಯವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಯುವಕನ ಮೇಲೆ ಹಲ್ಲೆಗೂ ಮುಂದಾದರು. ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು. “ಒಬ್ಬನೇ ಮಗನ ಮದುವೆಗೆಂದು ಸುಮಾರು 20 ಲಕ್ಷ ರೂಪಾಯಿ ಖರ್ಚು ಮಾಡಿದ್ದೆವು. ಈಗ ಮರ್ಯಾದೆ ಹರಾಜಾಗಿದೆ” ಎಂದು ವರನ ಪೋಷಕರು ಕಣ್ಣೀರು ಹಾಕಿದ್ದಾರೆ.
ಕೊನೆಗೆ ಗ್ರಾಮದ ಹಿರಿಯರ ಸಮ್ಮುಖದಲ್ಲಿ ಪಂಚಾಯ್ತಿ ನಡೆಸಿ ಪ್ರಕರಣವನ್ನು ಬಗೆಹರಿಸಲಾಗಿದೆ. ಒಟ್ಟಿನಲ್ಲಿ, ಕೊನೆಯ ಕ್ಷಣದ ಈ ಹೈಡ್ರಾಮಾದಿಂದಾಗಿ ಅದ್ಧೂರಿ ಮದುವೆ ಅರ್ಧಕ್ಕೇ ನಿಂತುಹೋಗಿದ್ದು, ಸ್ಥಳೀಯವಾಗಿ ಭಾರಿ ಚರ್ಚೆಗೆ ಕಾರಣವಾಗಿದೆ.




