ರಾಜಕೀಯರಾಜ್ಯಸುದ್ದಿ

ಅಮೆರಿಕದ ‘ಬ್ರೇಕ್’ಗೆ ಮೌನವೇಕೆ ಎಂದು ಪ್ರಿಯಾಂಕ್ ಖರ್ಗೆ ಪ್ರಶ್ನೆ!

ಕಲಬುರ್ಗಿ: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಅವರು ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದು, ದೇಶದ ವಿದೇಶಾಂಗ ನೀತಿಯನ್ನು ಮೋದಿ ಸರ್ಕಾರ ಅಡವಿಟ್ಟಿದೆ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ. ಭಾರತದ ಆರ್ಥಿಕ ಮತ್ತು ವ್ಯೂಹಾತ್ಮಕ ಬೆಳವಣಿಗೆಗೆ ಅಮೆರಿಕ ಸರ್ಕಾರ ಬ್ರೇಕ್ ಹಾಕುತ್ತಿರುವುದು ಸ್ಪಷ್ಟವಾಗಿ ಕಾಣಿಸುತ್ತಿದ್ದರೂ ಕೇಂದ್ರ ಸರ್ಕಾರ ಮೌನವಾಗಿರುವುದು ದೇಶದ ಮರ್ಯಾದೆಯನ್ನು ಹರಾಜು ಹಾಕುತ್ತಿದೆ ಎಂದು ಕಿಡಿಕಾರಿದ್ದಾರೆ.

ಅಮೆರಿಕದ ಉಪಕಾರ್ಯದರ್ಶಿಯೊಬ್ಬರು ಭಾರತವನ್ನು ಚೀನಾದ ಮಟ್ಟಕ್ಕೆ ಬೆಳೆಯಲು ಬಿಡುವುದಿಲ್ಲ ಎಂದು ಬಹಿರಂಗವಾಗಿ ಹೇಳಿಕೆ ನೀಡಿದ್ದಾರೆ. ಮತ್ತೊಂದೆಡೆ, ಭಾರತವು ಯಾರಿಂದ ತೈಲ ಖರೀದಿ ಮಾಡಬೇಕು ಎಂಬುದನ್ನು ನಾವೇ ನಿರ್ಧರಿಸುತ್ತೇವೆ ಎಂದು ಅಮೆರಿಕದ ಅಧಿಕಾರಿಗಳು ಹೇಳುತ್ತಿದ್ದಾರೆ. ಇಷ್ಟೆಲ್ಲಾ ಅವಮಾನಗಳಾಗುತ್ತಿದ್ದರೂ ಕೇಂದ್ರದ ಯಾವೊಬ್ಬ ಸಚಿವರೂ ಇದನ್ನು ವಿರೋಧಿಸುತ್ತಿಲ್ಲವೇಕೆ? ಪ್ರಧಾನಿ ನರೇಂದ್ರ ಮೋದಿ ಅವರ ಮರ್ಯಾದೆ ಜೊತೆಗೆ ದೇಶದ ಗೌರವವೂ ಜಾಗತಿಕ ಮಟ್ಟದಲ್ಲಿ ಹಾಳಾಗುತ್ತಿದೆ ಎಂದು ಪ್ರಿಯಾಂಕ್ ಖರ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿದೇಶಾಂಗ ನೀತಿಯಲ್ಲಿನ ಈ ವೈಫಲ್ಯದ ಬಗ್ಗೆ ಮಾತನಾಡದ ಆರ್‌ಎಸ್‌ಎಸ್ ನಾಯಕರನ್ನು ಪ್ರಶ್ನಿಸಿದ ಸಚಿವರು, ಎಲ್ಲ ವಿಚಾರಗಳಲ್ಲೂ ಮೂಗು ತೂರಿಸುತ್ತಿದ್ದ ಸಂಘ ಪರಿವಾರದವರು ಈಗ ಎಲ್ಲಿ ಅಡಗಿ ಕುಳಿತಿದ್ದಾರೆ ಎಂದು ಪ್ರಶ್ನಿಸಿದ್ದಾರೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೋದಿ ಅವರ ರಾಜಕೀಯವನ್ನೇ ನಾಶ ಮಾಡುತ್ತೇನೆ ಎಂದು ಹೇಳುತ್ತಿದ್ದರೂ ಬಿಜೆಪಿಯವರು ಮೌನಕ್ಕೆ ಶರಣಾಗಿರುವುದು ಆಶ್ಚರ್ಯಕರವಾಗಿದೆ ಎಂದು ಟೀಕಿಸಿದ್ದಾರೆ.

ರಾಜ್ಯ ಬಜೆಟ್ ಬಗ್ಗೆ ಮತ್ತು ರಾಜ್ಯ ಸರ್ಕಾರದ ಸಣ್ಣಪುಟ್ಟ ವಿಚಾರಗಳ ಬಗ್ಗೆ ದಿನನಿತ್ಯ ವಿಮರ್ಶೆ ಮಾಡುವ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು, ದೇಶದ ವಿದೇಶಾಂಗ ನೀತಿಗೆ ಧಕ್ಕೆಯಾಗುತ್ತಿರುವಾಗ ಯಾಕೆ ಸುಮ್ಮನಿದ್ದಾರೆ ಎಂದು ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ. ಅಮೆರಿಕದ ಹಸ್ತಕ್ಷೇಪದ ವಿರುದ್ಧ ಧ್ವನಿ ಎತ್ತದ ಕೇಂದ್ರ ಸಚಿವರ ನಡೆಯು ಭಾರತದ ಸ್ವತಂತ್ರ ವಿದೇಶಾಂಗ ನೀತಿಯನ್ನು ಅಡವಿಟ್ಟಂತಿದೆ ಎಂದು ಅವರು ಕಲಬುರಗಿಯಲ್ಲಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.

Comments (0)

Your email address will not be published. Required fields are marked *

Back to top button