#Exclusive NewsTop Newsರಾಜಕೀಯರಾಜ್ಯಸುದ್ದಿ

ಡಿ.ಕೆ. ಶಿವಕುಮಾರ್‌ಗೆ ಹೈಕೋರ್ಟ್ ಬಿಗ್ ರಿಲೀಫ್..!

ಬಿಜೆಪಿ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಆಕ್ಷೇಪಾರ್ಹ ಪೋಸ್ಟ್ ಹಂಚಿಕೊಂಡ ಆರೋಪ ಎದುರಿಸುತ್ತಿದ್ದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಹೈಕೋರ್ಟ್‌ನಿಂದ ದೊಡ್ಡ ರಿಲೀಫ್ ಸಿಕ್ಕಿದೆ. ಡಿಕೆಶಿ ವಿರುದ್ಧ ದಾಖಲಾಗಿದ್ದ ಎಫ್‌ಐಆರ್ ಪ್ರಕ್ರಿಯೆಗೆ ಹೈಕೋರ್ಟ್ ತಡೆ ನೀಡುವ ಮೂಲಕ ಕಾನೂನು ಹೋರಾಟದಲ್ಲಿ ತಾತ್ಕಾಲಿಕ ಜಯ ಸಿಕ್ಕಂತಾಗಿದೆ.

ಬಿಜೆಪಿ ವಿರುದ್ಧ “ನಾನು ಕರಸೇವಕ” ಎಂಬ ಒಕ್ಕಣೆಯೊಂದಿಗೆ ಆಕ್ಷೇಪಾರ್ಹ ಪೋಸ್ಟ್ ಮಾಡಲಾಗಿದೆ ಎಂಬ ದೂರಿನ ಅನ್ವಯ ಈ ಹಿಂದೆ ಪ್ರಕರಣ ದಾಖಲಿಸಲಾಗಿತ್ತು. ಈ ಪ್ರಕರಣವನ್ನು ರದ್ದುಗೊಳಿಸುವಂತೆ ಕೋರಿ ಡಿ.ಕೆ. ಶಿವಕುಮಾರ್ ಹೈಕೋರ್ಟ್ ಮೆಟ್ಟಿಲೇರಿದ್ದರು. ವಿಚಾರಣೆ ವೇಳೆ ಡಿಕೆಶಿ ಪರ ವಕೀಲರು ಪ್ರಬಲ ವಾದ ಮಂಡಿಸಿದ್ದು, “ಸಂಬಂಧಪಟ್ಟ ಸಾಮಾಜಿಕ ಜಾಲತಾಣದ ಖಾತೆಗೂ ಮತ್ತು ಡಿ.ಕೆ. ಶಿವಕುಮಾರ್ ಅವರಿಗೂ ಯಾವುದೇ ನೇರ ಸಂಬಂಧವಿಲ್ಲ. ಅನಗತ್ಯವಾಗಿ ಅವರನ್ನು ಈ ಪ್ರಕರಣದಲ್ಲಿ ಎಳೆಯಲಾಗಿದೆ” ಎಂದು ಕೋರ್ಟ್‌ಗೆ ಮನವರಿಕೆ ಮಾಡಿಕೊಟ್ಟರು.

ಉಭಯ ಪಕ್ಷಗಳ ವಾದ-ಪ್ರತಿವಾದಗಳನ್ನು ಆಲಿಸಿದ ನ್ಯಾಯಾಲಯ, ಸದ್ಯಕ್ಕೆ ಎಫ್‌ಐಆರ್ ಮುಂದಿನ ಪ್ರಕ್ರಿಯೆಗಳಿಗೆ ತಡೆ ನೀಡಿ ಆದೇಶಿಸಿದೆ. ಇದರಿಂದಾಗಿ ಡಿ.ಕೆ. ಶಿವಕುಮಾರ್ ಅವರಿಗೆ ಎದುರಾಗಿದ್ದ ಬಂಧನದ ಭೀತಿ ಅಥವಾ ತನಿಖೆಯ ಒತ್ತಡ ಸದ್ಯಕ್ಕೆ ದೂರಾದಂತಾಗಿದೆ.

ರಾಜಕೀಯ ಸಂಘರ್ಷದ ನಡುವೆ ಕಾನೂನು ಸಮರದಲ್ಲಿ ಡಿ.ಕೆ. ಶಿವಕುಮಾರ್ ಮೇಲುಗೈ ಸಾಧಿಸಿದ್ದು, ಕಾಂಗ್ರೆಸ್ ಪಾಳಯದಲ್ಲಿ ಈ ತೀರ್ಪು ಸಮಾಧಾನ ತಂದಿದೆ. ಸೋಷಿಯಲ್ ಮೀಡಿಯಾ ಪೋಸ್ಟ್‌ಗಳ ವಿಚಾರವಾಗಿ ರಾಜಕೀಯ ನಾಯಕರ ವಿರುದ್ಧ ಇತ್ತೀಚೆಗೆ ಸರಣಿ ಪ್ರಕರಣಗಳು ದಾಖಲಾಗುತ್ತಿರುವುದು ಚರ್ಚೆಗೆ ಗ್ರಾಸವಾಗಿರುವ ಬೆನ್ನಲ್ಲೇ ಈ ಮಹತ್ವದ ಆದೇಶ ಹೊರಬಿದ್ದಿದೆ.

Comments (0)

Your email address will not be published. Required fields are marked *

Back to top button