ಟಿ-20 ವಿಶ್ವಕಪ್ ಸೆಮೀಸ್ ಫೈಟ್; ಸಿದ್ಧಿವಿನಾಯಕನ ಮೊರೆ ಹೋದ ಸೂರ್ಯ ಪಡೆ!

ಮುಂಬೈನಲ್ಲಿ ನಡೆಯಲಿರುವ ಟಿ-20 ವಿಶ್ವಕಪ್‌ನ ನಿರ್ಣಾಯಕ ಸೆಮಿಫೈನಲ್ ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾದ ಆಟಗಾರರು ಮುಂಬೈನ ಸುಪ್ರಸಿದ್ಧ ಸಿದ್ಧಿವಿನಾಯಕ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ನಾಯಕ ಸೂರ್ಯಕುಮಾರ್ ಯಾದವ್ ನೇತೃತ್ವದ ತಂಡದ ಸದಸ್ಯರಾದ ಇಶಾನ್ ಕಿಶನ್, ಅಭಿಷೇಕ್ ಶರ್ಮಾ ಮತ್ತು ಅಕ್ಷರ್ ಪಟೇಲ್ ಅವರು ಗಣಪತಿಯ ಪಾದಕ್ಕೇರಗಿ ಗೆಲುವಿಗಾಗಿ ಪ್ರಾರ್ಥಿಸಿದರು. ಮಾರ್ಚ್ 5ರಂದು ಇಂಗ್ಲೆಂಡ್ ವಿರುದ್ಧ ನಡೆಯಲಿರುವ ಹೈವೋಲ್ಟೇಜ್ ಪಂದ್ಯದಲ್ಲಿ ಭಾರತ ತಂಡವು ಗೆದ್ದು ಫೈನಲ್‌ಗೆ ಲಗ್ಗೆ ಇಡಲಿ ಎಂಬುದು ಕೋಟಿ ಕೋಟಿ ಅಭಿಮಾನಿಗಳ ಹಾರೈಕೆಯಾಗಿದ್ದು, ಆಟಗಾರರು ಕೂಡ ದೈವದ ಮೊರೆ ಹೋಗುವ ಮೂಲಕ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿದ್ದಾರೆ.
ಈ ಬಾರಿಯ ವಿಶ್ವಕಪ್‌ನಲ್ಲಿ ಅಮೋಘ ಪ್ರದರ್ಶನ ನೀಡುತ್ತಾ ಬಂದಿರುವ ಭಾರತ ತಂಡಕ್ಕೆ ಇಂಗ್ಲೆಂಡ್ ವಿರುದ್ಧದ ಸೆಮಿಫೈನಲ್ ಪಂದ್ಯವು ಅತ್ಯಂತ ಕಠಿಣ ಸವಾಲಾಗಲಿದೆ. ಗೆದ್ದ ತಂಡ ನೇರವಾಗಿ ಫೈನಲ್‌ಗೆ ಪ್ರವೇಶ ಪಡೆಯುವುದರಿಂದ ಈ ಪಂದ್ಯವು ಭಾರೀ ಕುತೂಹಲ ಕೆರಳಿಸಿದೆ. ಮೈದಾನದಲ್ಲಿ ಬೆವರು ಹರಿಸುವ ಜೊತೆಗೆ ದೈವದ ಆಶೀರ್ವಾದವೂ ಮುಖ್ಯ ಎಂಬ ನಂಬಿಕೆಯೊಂದಿಗೆ ಆಟಗಾರರು ಮಹತ್ವದ ಪಂದ್ಯಕ್ಕೂ ಮುನ್ನ ದೇವಸ್ಥಾನಕ್ಕೆ ಭೇಟಿ ನೀಡಿರುವುದು ಅಭಿಮಾನಿಗಳಲ್ಲಿ ಹೊಸ ಭರವಸೆ ಮೂಡಿಸಿದೆ.




