ಟೀಸರ್ ಮೂಲಕ ಸಂಚಲನ ಮೂಡಿಸಿದ ‘ಗಾರ್ಜಿಯಸ್ ರಾಸ್ಕಲ್’ ಬಿಡುಗಡೆಗೆ ಸಿದ್ಧ!

ಕನ್ನಡ ಚಿತ್ರರಂಗದಲ್ಲಿ ವಿಭಿನ್ನ ಪ್ರಯೋಗಗಳ ಮೂಲಕ ಸದ್ದು ಮಾಡುತ್ತಿರುವ “ಗಾರ್ಜಿಯಸ್ ರಾಸ್ಕಲ್” ಚಿತ್ರದ ಟೀಸರ್ ಈಗ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಮೋಡಿ ಮಾಡುತ್ತಿದೆ. ಅದೃಷ್ಟಲಕ್ಷ್ಮೀ ಪ್ರೊಡಕ್ಷನ್ಸ್ ಲಾಂಛನದಲ್ಲಿ ಆರ್. ಚೇತನ್ ಕೃಷ್ಣ ನಿರ್ಮಿಸಿರುವ ಈ ಚಿತ್ರಕ್ಕೆ ಪ್ರಮೋದ್ ಜೋಯಿಸ್ ಕಥೆ ಮತ್ತು ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ.

ಡಾರ್ಕ್ ಕಾಮಿಡಿ ಜಾನರ್ನಲ್ಲಿ ಮೂಡಿಬಂದಿರುವ ಈ ಚಿತ್ರದ ಟೀಸರ್ ಅನ್ನು ಇತ್ತೀಚೆಗಷ್ಟೇ ಹೋಳಿ ಹುಣ್ಣಿಮೆಯ ವಿಶೇಷ ಸಂದರ್ಭದಲ್ಲಿ ಬಿಡುಗಡೆ ಮಾಡಲಾಗಿದ್ದು, ಅತಿ ಕಡಿಮೆ ಸಮಯದಲ್ಲಿ ಹೆಚ್ಚಿನ ವೀಕ್ಷಣೆ ಪಡೆಯುವ ಮೂಲಕ ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದೆ. ಟೀಸರ್ನಲ್ಲಿರುವ ವಿಭಿನ್ನ ಮೇಕಿಂಗ್ ಮತ್ತು ನಿರೂಪಣೆಗೆ ಸಿನಿಮಾ ಪ್ರಿಯರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಚಿತ್ರತಂಡ ಈಗ ಬಿಡುಗಡೆಯ ಸಡಗರದಲ್ಲಿದೆ.

ತಾಂತ್ರಿಕವಾಗಿ ಶ್ರೀಮಂತವಾಗಿರುವ ಈ ಚಿತ್ರಕ್ಕೆ ಸ್ವತಃ ನಿರ್ಮಾಪಕ ಚೇತನ್ ಕೃಷ್ಣ ಅವರೇ ಸಂಗೀತ ಸಂಯೋಜನೆ ಮಾಡಿದ್ದಾರೆ. ಶಂಕು ಅವರ ಛಾಯಾಗ್ರಹಣ ಹಾಗೂ ಅಕ್ಷಯ್ ಪಿ. ರಾವ್ ಅವರ ಸಂಕಲನ ಚಿತ್ರಕ್ಕಿದ್ದು, ಕೆಜಿಎಫ್ ಖ್ಯಾತಿಯ ನಂದು ಅವರ ಶಬ್ದ ವಿನ್ಯಾಸಚಿತ್ರದ ತೂಕವನ್ನು ಹೆಚ್ಚಿಸಿದೆ. ಚರಣ್ ಸುವರ್ಣ ಅವರು ಕ್ರಿಯೇಟಿವ್ ಹೆಡ್ ಆಗಿ ಕಾರ್ಯನಿರ್ವಹಿಸಿದ್ದು, ಶ್ರೀನಿವಾಸ್ ಬೆಟ್ಟದಪುರ ಅವರ ಸಹ ನಿರ್ಮಾಣ ಚಿತ್ರಕ್ಕಿದೆ. ಗುಣಮಟ್ಟದ ತಾಂತ್ರಿಕ ತಂಡದ ಶ್ರಮ ಟೀಸರ್ನಲ್ಲಿ ಎದ್ದು ಕಾಣುತ್ತಿದ್ದು, ಡಾರ್ಕ್ ಕಾಮಿಡಿ ಪ್ರಿಯರಿಗೆ ಈ ಸಿನಿಮಾ ಒಂದು ಹೊಸ ಅನುಭವ ನೀಡುವ ಭರವಸೆ ಮೂಡಿಸಿದೆ.

ಚಿತ್ರದ ತಾರಾಬಳಗದಲ್ಲಿ ಪ್ರೇರಣಾ ಭಟ್, ಯುವಿನ್, ರಾಜವೀರ್ ಸಿಂಗ್, ಚೇತನ್ ಮಹೇಶ್, ಶಕ್ತಿಕುಮಾರ್ ಅವರಂತಹ ಪ್ರತಿಭಾನ್ವಿತ ಕಲಾವಿದರಿದ್ದಾರೆ. ಜೊತೆಗೆ ಹಿರಿಯ ನಟರಾದ ಸುನೀಲ್ ಪುರಾಣಿಕ್ ಮತ್ತು ಸ್ವಾತಿ ಅವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಎಲ್ಲಾ ತಯಾರಿಗಳನ್ನು ಮುಗಿಸಿಕೊಂಡಿರುವ “ಗಾರ್ಜಿಯಸ್ ರಾಸ್ಕಲ್” ಇದೇ ಶುಕ್ರವಾರ, ಅಂದರೆ ಮಾರ್ಚ್ 6 ರಂದು ರಾಜ್ಯಾದ್ಯಂತ ಅದ್ಧೂರಿಯಾಗಿ ತೆರೆಗೆ ಬರಲು ಸಿದ್ಧವಾಗಿದೆ. ಹೊಸ ಅಲೆಯ ಸಿನಿಮಾಗಳನ್ನು ಇಷ್ಟಪಡುವ ಕನ್ನಡಿಗರಿಗೆ ಈ ವಾರಾಂತ್ಯದಲ್ಲಿ “ಗಾರ್ಜಿಯಸ್ ರಾಸ್ಕಲ್” ಉತ್ತಮ ಮನರಂಜನೆ ನೀಡಲು ಸಜ್ಜಾಗಿದೆ.




