Top Newsರಾಜ್ಯಸುದ್ದಿಹಣಕಾಸು

ಕರ್ನಾಟಕಕ್ಕೆ ಸಾಲದ ಸುನಾಮಿ; 8 ಲಕ್ಷ ಕೋಟಿ ದಾಟಿದ ಸಾಲದ ಹೊರೆ!

ಕರ್ನಾಟಕ ರಾಜ್ಯವು ಇದೀಗ ಭೀಕರ ಸಾಲದ ಸುಳಿಗೆ ಸಿಲುಕುವ ಮುನ್ಸೂಚನೆ ಸಿಕ್ಕಿದ್ದು, ರಾಜ್ಯದ ಒಟ್ಟು ಸಾಲದ ಮೊತ್ತ ಬರೋಬ್ಬರಿ 8.14 ಲಕ್ಷ ಕೋಟಿ ರೂಪಾಯಿಗಳ ಗಡಿ ದಾಟುವ ಆತಂಕ ಎದುರಾಗಿದೆ. ಮಾರ್ಚ್ ತಿಂಗಳ ಅಂತ್ಯದ ವೇಳೆಗೆ ರಾಜ್ಯದ ಸಾಲದ ಮೊತ್ತ ಹೊಸ ದಾಖಲೆ ಬರೆಯಲಿದ್ದು, ಕೇವಲ ಬಡ್ಡಿ ಪಾವತಿಗಾಗಿಯೇ ಸರ್ಕಾರ ಪ್ರತಿ ವರ್ಷ ಅಂದಾಜು 48,000 ಕೋಟಿ ರೂಪಾಯಿಗಳನ್ನು ವ್ಯಯಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಅತ್ತ ಜಿಎಸ್​​ಟಿ ಸ್ಲ್ಯಾಬ್ ಪರಿಷ್ಕರಣೆಯಿಂದ ರಾಜ್ಯದ ಬೊಕ್ಕಸಕ್ಕೆ ದೊಡ್ಡ ಹೊಡೆತ ಬಿದ್ದಿದ್ದರೆ, ಇತ್ತ ವಾಣಿಜ್ಯ ತೆರಿಗೆ ಹಾಗೂ ಮುದ್ರಾಂಕ ಶುಲ್ಕ ಸಂಗ್ರಹದಲ್ಲೂ ನಿರೀಕ್ಷಿತ ಗುರಿ ತಲುಪಲು ಸರ್ಕಾರ ವಿಫಲವಾಗಿರುವುದು ಆರ್ಥಿಕ ಹಿನ್ನಡೆಗೆ ಮುಖ್ಯ ಕಾರಣವಾಗಿದೆ.

ರಾಜ್ಯದ ಆರ್ಥಿಕ ಶಿಸ್ತನ್ನು ಕಾಪಾಡಲು ವಿಧಿಸಲಾಗಿದ್ದ ಶೇ. 25ರ ಸಾಲದ ಮಿತಿಯ ‘ಲಕ್ಷ್ಮಣ ರೇಖೆ’ ಈಗ ಉಲ್ಲಂಘನೆಯಾಗುವ ಭೀತಿಯಲ್ಲಿದೆ. ಆರ್​​ಬಿಐ ವರದಿಯ ಪ್ರಕಾರ, ರಾಜ್ಯದ ಸಾಲದ ಪ್ರಮಾಣವು ಜಿಎಸ್​​ಡಿಪಿಯ ಶೇ. 26.5ಕ್ಕೆ ಏರಿಕೆಯಾಗುವ ಸಾಧ್ಯತೆಯಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಂದಾಜಿಸಿದ್ದ ಆರ್ಥಿಕ ಲೆಕ್ಕಾಚಾರಗಳು ಈಗ ಅದಲು-ಬದಲಾಗುತ್ತಿದ್ದು, ಅಭಿವೃದ್ಧಿ ಕೆಲಸಗಳಿಗಿಂತ ಹೆಚ್ಚಾಗಿ ಸಾಲ ತೀರಿಸುವುದೇ ಸರ್ಕಾರಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಮತ್ತು ಬದ್ಧ ವೆಚ್ಚಗಳ ಹೊರೆಯಿಂದಾಗಿ ರಾಜ್ಯದ ಹಣಕಾಸು ಪರಿಸ್ಥಿತಿ ತತ್ತರಿಸಿ ಹೋಗಿದೆ.

ಮುಂದಿನ ದಿನಗಳಲ್ಲಿ ರಾಜ್ಯಕ್ಕೆ ಇನ್ನೂ ಭೀಕರ ಭವಿಷ್ಯ ಕಾದಿದೆ ಎಂದು ಅಂಕಿಅಂಶಗಳು ಹೇಳುತ್ತಿವೆ. 2028-29ರ ವೇಳೆಗೆ ರಾಜ್ಯದ ಒಟ್ಟು ಸಾಲದ ಮೊತ್ತ ಬರೋಬ್ಬರಿ 10.17 ಲಕ್ಷ ಕೋಟಿ ರೂಪಾಯಿಗಳಿಗೆ ತಲುಪಲಿದೆ ಎಂದು ಅಂದಾಜಿಸಲಾಗಿದೆ. ಸರ್ಕಾರಿ ನೌಕರರ ವೇತನ ಮತ್ತು ಪಿಂಚಣಿ ವೆಚ್ಚಗಳನ್ನು ಭರಿಸಲು ಕೂಡ ಸಾಲ ಮಾಡಲೇಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಆದಾಯ ಸಂಗ್ರಹಣೆಯಲ್ಲಿನ ಫ್ಲಾಪ್ ಶೋ ಮತ್ತು ಹೆಚ್ಚುತ್ತಿರುವ ವೆಚ್ಚಗಳ ನಡುವೆ ಸಮತೋಲನ ಕಾಯ್ದುಕೊಳ್ಳುವುದು ಸರ್ಕಾರಕ್ಕೆ ಈಗ ಕಬ್ಬಿಣದ ಕಡಲೆಯಾಗಿದೆ.

Comments (0)

Your email address will not be published. Required fields are marked *

Back to top button