ಜಿಲ್ಲೆಸುದ್ದಿ

ಸಿಲಿಕಾನ್ ಸಿಟಿಗೆ ರೈಲ್ವೆ ಕಂಟಕ; ಬೈಯಪ್ಪನಹಳ್ಳಿಯಲ್ಲಿ 269 ಮರಗಳ ಮಾರಣಹೋಮ?

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ಹಸಿರು ಹೊದಿಕೆಗೆ ಈಗ ರೈಲ್ವೆ ಅಭಿವೃದ್ಧಿಯ ಬಿಸಿ ತಟ್ಟಿದ್ದು, ಬೈಯಪ್ಪನಹಳ್ಳಿಯಲ್ಲಿ ನೂರಾರು ಮರಗಳ ಮಾರಣಹೋಮಕ್ಕೆ ರೈಲ್ವೆ ಇಲಾಖೆ ಸಜ್ಜಾಗಿದೆ. ಎಸ್‌ಎಂವಿಟಿ ರೈಲು ನಿಲ್ದಾಣದ ಅಭಿವೃದ್ಧಿ ಹಾಗೂ ರೈಲುಗಳ ನಿರ್ವಹಣಾ ಘಟಕದ ವಿಸ್ತರಣೆ ಹೆಸರಿನಲ್ಲಿ ಸುಮಾರು 269 ಬೃಹತ್ ಮರಗಳನ್ನು ಕಡಿಯಲು ನಿರ್ಧರಿಸಲಾಗಿದೆ.

ದಶಕಗಳ ಇತಿಹಾಸವಿರುವ ಈ ಮರಗಳನ್ನು ಅಭಿವೃದ್ಧಿಯ ಹೆಸರಲ್ಲಿ ಬಲಿ ಕೊಡುತ್ತಿರುವುದು ಪರಿಸರ ಪ್ರೇಮಿಗಳು ಹಾಗೂ ಸ್ಥಳೀಯ ನಿವಾಸಿಗಳ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.ಗಾರ್ಡನ್ ಸಿಟಿ ಎಂಬ ಹೆಗ್ಗಳಿಕೆಯ ಬೆಂಗಳೂರು ಈಗ ಕಾಂಕ್ರೀಟ್ ಕಾಡಾಗಿ ಬದಲಾಗುತ್ತಿದೆ ಎಂಬ ಆತಂಕ ಸಾರ್ವಜನಿಕರಲ್ಲಿ ಮನೆಮಾಡಿದೆ.

ಯಾವುದೇ ಕಾರಣಕ್ಕೂ ಮರಗಳನ್ನು ಕಡಿಯಬಾರದು, ಬದಲಾಗಿ ಮರಗಳ ಸ್ಥಳಾಂತರಕ್ಕೆ ಒತ್ತು ನೀಡಬೇಕು ಎಂದು ಪರಿಸರವಾದಿಗಳು ಪಟ್ಟು ಹಿಡಿದಿದ್ದಾರೆ. ರೈಲ್ವೆ ಇಲಾಖೆ ತನ್ನ ನಿರ್ಧಾರದಿಂದ ಹಿಂದೆ ಸರಿಯದಿದ್ದರೆ ರೈಲು ನಿಲ್ದಾಣದ ಮುಂಭಾಗದಲ್ಲೇ ಬೃಹತ್ ಪ್ರತಿಭಟನೆ ನಡೆಸುವುದಾಗಿ ಹೋರಾಟಗಾರರು ಎಚ್ಚರಿಕೆ ನೀಡಿದ್ದಾರೆ. ಅಭಿವೃದ್ಧಿ ಬೇಕು, ಆದರೆ ಅದು ಪರಿಸರವನ್ನು ನಾಶಮಾಡಿ ಅಲ್ಲ ಎಂಬ ಕೂಗು ಬೈಯಪ್ಪನಹಳ್ಳಿಯಲ್ಲಿ ಜೋರಾಗಿದೆ.

Comments (0)

Your email address will not be published. Required fields are marked *

Back to top button