ಬೆಂಗಳೂರು: ಪ್ರತಿಷ್ಠಿತ ಆಸ್ಪತ್ರೆಯೊಂದರಲ್ಲಿ ರೋಗಿಗಳಿಗೆ ಜೀವ ನೀಡಬೇಕಾದ ವೈದ್ಯಕೀಯ ಕ್ಷೇತ್ರದ ಉನ್ನತ ಅಧಿಕಾರಿಯೊಬ್ಬ ಕಾಮುಕನಾಗಿ ವರ್ತಿಸಿರುವ ಘೋರ ಪ್ರಕರಣ ಬೆಳಕಿಗೆ ಬಂದಿದೆ.
ಲಕ್ಕಸಂದ್ರದ ಬ್ರೈನ್ಸ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಎಕ್ಸಿಕ್ಯೂಟಿವ್ ಡೈರೆಕ್ಟರ್ ತ್ರಿವಿಕ್ರಮ ರಾವ್ ಎಂಬುವವರ ವಿರುದ್ಧ ಅದೇ ಆಸ್ಪತ್ರೆಯ ಅಡ್ಮಿನ್ ಮ್ಯಾನೇಜರ್ ಆಗಿದ್ದ ಮಹಿಳೆಯೊಬ್ಬರು ಲೈಂಗಿಕ ದೌರ್ಜನ್ಯ ಮತ್ತು ಅತ್ಯಾಚಾರದ ಗಂಭೀರ ಆರೋಪ ಮಾಡಿದ್ದಾರೆ. ಕೆಲಸಕ್ಕೆ ಸೇರಿದ ಎರಡೇ ತಿಂಗಳಿಗೆ ಈ ಕಾಮುಕ ನಿರ್ದೇಶಕ ಮಹಿಳಾ ಉದ್ಯೋಗಿಯ ಮೇಲೆ ಹದ್ದಿನ ಕಣ್ಣಿಟ್ಟು, ಪದೇ ಪದೇ ತನ್ನ ಕ್ಯಾಬಿನ್‌ಗೆ ಕರೆಸಿಕೊಂಡು ಅಸಭ್ಯವಾಗಿ ವರ್ತಿಸುತ್ತಿದ್ದ ಎನ್ನಲಾಗಿದೆ.
ಕಳೆದ ಡಿಸೆಂಬರ್‌ನಲ್ಲಿ ಮೀಟಿಂಗ್ ಹೆಸರಲ್ಲಿ ಸಂತ್ರಸ್ತೆಯನ್ನು ಎಂ.ಜಿ ರಸ್ತೆಯ ಓಬೆರಾಯ್ ಹೋಟೆಲ್‌ಗೆ ಕರೆದೊಯ್ದಿದ್ದ ಈತ, ಹಸ್ತ ಸಾಮುದ್ರಿಕ ನೋಡಿ ಭವಿಷ್ಯ ಹೇಳುವ ನಾಟಕವಾಡಿ ಅಸಭ್ಯವಾಗಿ ನಡೆದುಕೊಂಡಿದ್ದಾನೆ. ಅಷ್ಟೇ ಅಲ್ಲದೆ, ಡಿಸೆಂಬರ್ 23ರಂದು ಹೋಟೆಲ್ ರೂಮ್‌ನಲ್ಲಿ ಬಲವಂತವಾಗಿ ಅತ್ಯಾಚಾರ ಎಸಗಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಈ ವಿಚಾರವನ್ನು ಯಾರಿಗಾದರೂ ಹೇಳಿದರೆ ಕೆಲಸದಿಂದ ತೆಗೆದುಹಾಕುವುದಾಗಿ ಬೆದರಿಕೆ ಹಾಕಿದ್ದ ಈ ‘ಬಿಳಿ ಕೋಟಿನ ರಾಕ್ಷಸ’ನ ಕಿರುಕುಳ ತಾಳಲಾರದೆ ಸಂತ್ರಸ್ತೆ ಕೆಲಸಕ್ಕೆ ರಾಜೀನಾಮೆ ನೀಡಿದ್ದಾರೆ. ಸದ್ಯ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಆರೋಪಿಗಾಗಿ ಹುಡುಕಾಟ ಆರಂಭಿಸಿದ್ದಾರೆ.


