ಜಿಲ್ಲೆಸುದ್ದಿ

ಅಸ್ಪೃಶ್ಯತೆಯ ಹೀನ ಕೃತ್ಯ; ದೇವಸ್ಥಾನಕ್ಕೆ ಬಂದ ದಲಿತ ದಂಪತಿಯನ್ನು ಹೊರಹಾಕಿ ಅವಮಾನ!

ತುಮಕೂರು: ಅಸ್ಪೃಶ್ಯತೆಯ ಕರಾಳ ಮುಖ ಮತ್ತೆ ಅನಾವರಣಗೊಂಡಿದ್ದು, ನವದಂಪತಿಗೆ ದೇವಸ್ಥಾನ ಪ್ರವೇಶ ನಿರಾಕರಿಸಿದ ನಾಚಿಕೆಗೇಡಿನ ಘಟನೆ ಬೆಳಕಿಗೆ ಬಂದಿದೆ. ರಾಜ್ಯದ ಗೃಹ ಸಚಿವರ ತವರು ಜಿಲ್ಲೆಯಲ್ಲೇ ಇಂತಹ ಹೀನ ಕೃತ್ಯ ನಡೆದಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ತುರುವೇಕೆರೆ ತಾಲ್ಲೂಕಿನ ಗೋಣಿ ತುಮಕೂರು ಗ್ರಾಮದಲ್ಲಿ ದೇವರ ಆಶೀರ್ವಾದ ಪಡೆಯಲು ಬಂದಿದ್ದ ದಲಿತ ದಂಪತಿಯನ್ನು ಅಸ್ಪೃಶ್ಯತೆಯ ಹೆಸರಿನಲ್ಲಿ ಅವಮಾನಿಸಿ ಹೊರಹಾಕಲಾಗಿದೆ.

ಗ್ರಾಮದ ಅರಸಮ್ಮ ದೇವಾಲಯಕ್ಕೆ ಹೊಸದಾಗಿ ಮದುವೆಯಾದ ದಲಿತ ದಂಪತಿಗಳು ಭೇಟಿ ನೀಡಿದಾಗ, ಅಲ್ಲಿನ ನಾರಾಯಣಪ್ಪ ಎಂಬ ವ್ಯಕ್ತಿ ಅಡ್ಡಿಪಡಿಸಿದ್ದಾನೆ. ಮೈಮೇಲೆ ದೇವರು ಬಂದಂತೆ ನಾಟಕವಾಡಿದ ಈತ, “ದಲಿತರಿಗೆ ಇಲ್ಲಿ ಪ್ರವೇಶವಿಲ್ಲ, ದೇವಾಲಯ ಅಪವಿತ್ರವಾಗಿದೆ, ಪುಣ್ಯ ಮಾಡಿಸಬೇಕು” ಎಂದು ಕೂಗಾಡಿ ನವದಂಪತಿಯನ್ನು ಗದರಿಸಿ ಹೊರಕಳಿಸಿದ್ದಾನೆ.

ದಂಪತಿಗೆ ಅವಮಾನವಾಗುತ್ತಿದ್ದರೂ ಅಲ್ಲೇ ಇದ್ದ ಗ್ರಾಮದ ಇತರ ಪುರುಷರು ಮತ್ತು ಮಹಿಳೆಯರು ಇದನ್ನು ವಿರೋಧಿಸುವ ಬದಲಿಗೆ ಹಲ್ಲುಗಿಂಜಿ ನಗುತ್ತಾ ನಿಂತಿದ್ದರು. ಮನುಷ್ಯತ್ವ ಮರೆತು ಅಸ್ಪೃಶ್ಯತೆಯನ್ನು ಸಂಭ್ರಮಿಸಿದ ಈ ದೃಶ್ಯಗಳು ನಾಗರಿಕ ಸಮಾಜ ತಲೆತಗ್ಗಿಸುವಂತೆ ಮಾಡಿದೆ. ಅಸ್ಪೃಶ್ಯತೆಯ ವಿರುದ್ಧ ಕಠಿಣ ಕಾನೂನುಗಳಿದ್ದರೂ, ಗ್ರಾಮೀಣ ಭಾಗದಲ್ಲಿ ಇಂದಿಗೂ ಇಂತಹ ಅನಿಷ್ಟ ಪದ್ಧತಿಗಳು ಜೀವಂತವಾಗಿರುವುದು ಕಳವಳಕಾರಿ ವಿಚಾರವಾಗಿದೆ.ಈಗಾಗಲೇ ಈ ಘಟನೆಗೆ ಸಂಬಂಧಿಸಿದಂತೆ ಜಿಲ್ಲಾಡಳಿತ ಮತ್ತು ಪೊಲೀಸರ ಗಮನಕ್ಕೆ ವಿಷಯ ತಲುಪಿದ್ದು, ದಲಿತ ಸಂಘಟನೆಗಳು ಆರೋಪಿಯ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿವೆ.

Comments (0)

Your email address will not be published. Required fields are marked *

Back to top button