ಹಾವೇರಿ: ಹಿರೇಕೆರೂರು ತಾಲೂಕಿನ ಚನ್ನಹಳ್ಳಿ ತಾಂಡಾ ಬಳಿ ಸಿನಿಮಾ ಮಾದರಿಯ ಘಟನೆಯೊಂದು ನಡೆದಿದ್ದು, ಪ್ರೇಮಿಗಳ ಮದುವೆ ಮಾಡಿಸಲು ವೇಗವಾಗಿ ತೆರಳುತ್ತಿದ್ದ ಕಾರು ಪಲ್ಟಿಯಾಗಿದೆ. ಬೆಂಗಳೂರಿನಿಂದ ಬಂದಿದ್ದ ಮೂವರು ಯುವಕರು, ಚನ್ನಹಳ್ಳಿ ಪ್ಲ್ಯಾಟ್‌ನ ಯುವತಿಯನ್ನು ಕರೆದುಕೊಂಡು ಹೋಗುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಮದುವೆಯ ಸಂಭ್ರಮದಲ್ಲಿದ್ದ ಈ ಯುವಕರಿಗೆ ಅಪಘಾತವು ಸಂಕಷ್ಟ ತಂದೊಡ್ಡಿದೆ.
ಮೂಲತಃ ಕಲಬುರಗಿ ಜಿಲ್ಲೆಯ ಜೇವರ್ಗಿಯ ಇರ್ಫಾನ್ ಎಂಬ ಯುವಕ, ಚನ್ನಹಳ್ಳಿ ಪ್ಲ್ಯಾಟ್‌ನ ಯುವತಿಯನ್ನು ಪ್ರೀತಿಸುತ್ತಿದ್ದ, ಆಕೆಯನ್ನು ಮದುವೆಯಾಗಲು ತನ್ನ ಸ್ನೇಹಿತರಾದ ಚಂದ್ರು ಮತ್ತು ಗುರುರಾಜ್ ಜೊತೆಗೂಡಿ ಸ್ವಿಫ್ಟ್ ಕಾರಿನಲ್ಲಿ ಬಂದಿದ್ದನು. ಯುವತಿಯನ್ನು ಕಾರಿನಲ್ಲಿ ಹತ್ತಿಸಿಕೊಂಡು ಮದುವೆಗೆಂದು ಹೊರಟಿದ್ದಾಗ, ಚನ್ನಹಳ್ಳಿ ತಾಂಡಾದ ಬಳಿ ಚಾಲಕನ ನಿಯಂತ್ರಣ ತಪ್ಪಿದ ಕಾರು ಪಲ್ಟಿಯಾಗಿದೆ. ಈ ಭೀಕರ ಅಪಘಾತದಲ್ಲಿ ಕಾರು ಸಂಪೂರ್ಣವಾಗಿ ಜಖಂಗೊಂಡಿದ್ದು, ಇರ್ಫಾನ್ ಸೇರಿದಂತೆ ಮೂವರು ಯುವಕರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಅಚ್ಚರಿಯ ವಿಷಯವೆಂದರೆ, ಅಪಘಾತ ಸಂಭವಿಸುತ್ತಿದ್ದಂತೆಯೇ ಮದುವೆಯಾಗಬೇಕಿದ್ದ ಯುವತಿ ಸ್ಥಳದಿಂದ ಎಸ್ಕೇಪ್ ಆಗಿದ್ದಾಳೆ. ಗಾಯಗೊಂಡ ಗೆಳೆಯರು ಮತ್ತು ಪ್ರೇಮಿಯನ್ನು ಸ್ಥಳದಲ್ಲೇ ಬಿಟ್ಟು ಯುವತಿ ಕಾಲ್ಕಿತ್ತಿರುವುದು ಈಗ ಚರ್ಚೆಗೆ ಕಾರಣವಾಗಿದೆ. ಗಾಯಾಳುಗಳನ್ನು ತಕ್ಷಣವೇ ಹಾವೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ವಿಷಯ ತಿಳಿಯುತ್ತಿದ್ದಂತೆಯೇ ಹಿರೇಕೆರೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.


