ಜಿಲ್ಲೆಸುದ್ದಿ

ಸಿಂದಗಿ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರ ನಿರ್ಲಕ್ಷ್ಯ; ಬಾಣಂತಿ ಮತ್ತು ಶಿಶು ಸಾವು

ವಿಜಯಪುರ: ಸಿಂದಗಿ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರ ಗೈರುಹಾಜರಿ ಮತ್ತು ನಿರ್ಲಕ್ಷ್ಯದಿಂದಾಗಿ ಬಾಣಂತಿ ಹಾಗೂ ನವಜಾತ ಶಿಶು ಮೃತಪಟ್ಟಿರುವ ಅತ್ಯಂತ ಕರುಣಾಜನಕ ಘಟನೆ ನಡೆದಿದೆ.

ಢವಳಾರ ಗ್ರಾಮದ ಮೈತ್ರಾ ಎಂಬ ಗರ್ಭಿಣಿಯನ್ನು ಹೆರಿಗೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದರೂ, ಅಲ್ಲಿ ಕರ್ತವ್ಯದಲ್ಲಿ ಇರಬೇಕಾದ ವೈದ್ಯರು ಲಭ್ಯವಿರಲಿಲ್ಲ ಎಂದು ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ. ವೈದ್ಯರಿಲ್ಲದ ಕಾರಣ ಅನಿವಾರ್ಯವಾಗಿ ನರ್ಸ್‌ಗಳು ಮತ್ತು ಆಸ್ಪತ್ರೆ ಸಿಬ್ಬಂದಿಯೇ ಹೆರಿಗೆ ಮಾಡಿದ್ದು, ಈ ಪ್ರಕ್ರಿಯೆಯಲ್ಲೇ ನವಜಾತ ಗಂಡು ಶಿಶು ಸ್ಥಳದಲ್ಲೇ ಸಾವನ್ನಪ್ಪಿದೆ. ತದನಂತರ ಬಾಣಂತಿಗೆ ತೀವ್ರ ರಕ್ತಸ್ರಾವ ಉಂಟಾಗಿ ಪರಿಸ್ಥಿತಿ ವಿಕೋಪಕ್ಕೆ ಹೋದಾಗ, ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯುವಂತೆ ಸೂಚಿಸಲಾಯಿತು. ಆದರೆ ವಿಜಯಪುರಕ್ಕೆ ತೆರಳುವ ಮಾರ್ಗಮಧ್ಯೆಯೇ ಕೊನೆಯುಸಿರೆಳೆದಿದ್ದಾರೆ.

ಈ ಅನಿರೀಕ್ಷಿತ ಸಾವುಗಳಿಗೆ ವೈದ್ಯರ ಬೇಜವಾಬ್ದಾರಿತನವೇ ನೇರ ಕಾರಣ ಎಂದು ಮೃತರ ಪೋಷಕರು ಆಕ್ರೋಶ ಹೊರಹಾಕಿದ್ದಾರೆ. ಸಿಂದಗಿ ತಾಲೂಕು ಆಸ್ಪತ್ರೆಯಲ್ಲಿ ವೈದ್ಯರು ಸರಿಯಾದ ಸಮಯಕ್ಕೆ ಕರ್ತವ್ಯ ನಿರ್ವಹಿಸುತ್ತಿಲ್ಲ ಎನ್ನುವ ದೂರುಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದ್ದು, ಘಟನೆಯ ಹಿನ್ನೆಲೆ ಉನ್ನತ ಮಟ್ಟದ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಜಿಲ್ಲಾ ವೈದ್ಯಾಧಿಕಾರಿ ಸಂಪತ್ ಕುಮಾರ್ ಅವರು, ಪ್ರಕರಣದ ಬಗ್ಗೆ ಪೂರ್ಣ ಪ್ರಮಾಣದ ತನಿಖೆ ನಡೆಸಿದ ನಂತರ ಸೂಕ್ತ ಕ್ರಮ ಜರುಗಿಸುವುದಾಗಿ ಭರವಸೆ ನೀಡಿದ್ದಾರೆ.

Comments (0)

Your email address will not be published. Required fields are marked *

Back to top button