ಕ್ರೈಂ ಸ್ಟೋರಿಸಿನಿಮಾಸುದ್ದಿ

ನಟಿ ಪ್ರತ್ಯುಷಾ ಸಾವು ; 24 ವರ್ಷಗಳ ಬಳಿಕ ಪ್ರಿಯಕರನಿಗೆ 5 ವರ್ಷ ಜೈಲು!

ನಟಿ ಪ್ರತ್ಯುಷಾ ಅವರ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ, ಬರೋಬ್ಬರಿ 24 ವರ್ಷಗಳ ಸುದೀರ್ಘ ಕಾನೂನು ಹೋರಾಟದ ನಂತರ ಈಗ ಸುಪ್ರೀಂಕೋರ್ಟ್ ಅಂತಿಮ ತೀರ್ಪು ಪ್ರಕಟಿಸಿದೆ.

ಬಾಲಿವುಡ್ ಮತ್ತು ಕಾಲಿವುಡ್‌ನಲ್ಲಿ ಸತತ 11 ಬ್ಲಾಕ್ ಬಸ್ಟರ್ ಚಿತ್ರಗಳನ್ನು ನೀಡಿ, ಕೇವಲ 22ನೇ ವಯಸ್ಸಿಗೆ ಸ್ಟಾರ್ ನಟಿಯಾಗಿದ್ದ ಪ್ರತ್ಯುಷಾ, 2002ರಲ್ಲಿ ತಮ್ಮ ಪ್ರಿಯಕರ ಸಿದ್ಧಾರ್ಥ್ ರೆಡ್ಡಿ ಜೊತೆ ಆತ್ಮಹತ್ಯೆಗೆ ನಿರ್ಧರಿಸಿದ್ದರು. ಇಬ್ಬರೂ ವಿಷ ಸೇವಿಸಿದ್ದರೂ, ವಿಧಿಯಾಟದಂತೆ ಸಿದ್ಧಾರ್ಥ್ ಬದುಕುಳಿದರೆ, ಪ್ರತ್ಯುಷಾ ಮರಣವನ್ನಪ್ಪಿದ್ದರು. ಅಂದಿನಿಂದ ನಡೆಯುತ್ತಿದ್ದ ಈ ಸಂಕೀರ್ಣ ಪ್ರಕರಣದಲ್ಲಿ ನ್ಯಾಯಮೂರ್ತಿಗಳಾದ ಮನಮೋಹನ್ ಮತ್ತು ರಾಜೇಶ್ ಬಿಂದಾಲ್ ಅವರಿದ್ದ ಪೀಠವು, ಸಿದ್ಧಾರ್ಥ್ ರೆಡ್ಡಿಗೆ ಐದು ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಯನ್ನು ಎತ್ತಿ ಹಿಡಿದಿದೆ. ಅಷ್ಟೇ ಅಲ್ಲದೆ, 4 ವಾರಗಳ ಒಳಗಾಗಿ ಪೊಲೀಸರಿಗೆ ಶರಣಾಗುವಂತೆ ಅಪರಾಧಿಗೆ ಆದೇಶಿಸಿದೆ.

ಆತ್ಮಹತ್ಯೆ ಒಪ್ಪಂದದ ಪ್ರಕಾರ ಇಬ್ಬರೂ ಸಾವಿಗೆ ಮುಂದಾದಾಗ, ಒಬ್ಬರು ಬದುಕುಳಿದರೆ ಅದು ಕಾನೂನಿನ ದೃಷ್ಟಿಯಲ್ಲಿ ಅಪರಾಧವಾಗುತ್ತದೆ. ಪ್ರತ್ಯುಷಾ ಅವರ ತಾಯಿ ಇದು ಕೊಲೆ ಮತ್ತು ಅತ್ಯಾಚಾರ ಎಂದು ವಾದಿಸಿದ್ದರಾದರೂ, ವೈದ್ಯಕೀಯ ವರದಿಗಳ ಆಧಾರದ ಮೇಲೆ ಅತ್ಯಾಚಾರ ನಡೆದಿಲ್ಲ ಎಂದು ಕೋರ್ಟ್ ಸ್ಪಷ್ಟಪಡಿಸಿದೆ. ಆದರೆ, ಪ್ರತ್ಯುಷಾ ಅವರ ಸಾವಿಗೆ ಪ್ರೇರಣೆ ನೀಡಿದ ಹಾಗೂ ಆತ್ಮಹತ್ಯೆ ಒಪ್ಪಂದದಲ್ಲಿ ಭಾಗಿಯಾದ ಕಾರಣಕ್ಕೆ ಸಿದ್ಧಾರ್ಥ್ ರೆಡ್ಡಿಯನ್ನು ಅಪರಾಧಿ ಎಂದು ಘೋಷಿಸಲಾಗಿದೆ. 18ನೇ ವಯಸ್ಸಿಗೆ ಬಣ್ಣದ ಲೋಕಕ್ಕೆ ಕಾಲಿಟ್ಟು ಸೂಪರ್ ಸ್ಟಾರ್ ಆಗಿದ್ದ ನಟಿ ಪ್ರತ್ಯುಷಾ ಅವರ ಬದುಕು ಹೀಗೆ ಸಿನಿಮೀಯ ಶೈಲಿಯಲ್ಲೇ ಅಂತ್ಯಗೊಂಡಿದ್ದು ಸಿನಿರಂಗದ ದೊಡ್ಡ ದುರಂತಗಳಲ್ಲಿ ಒಂದಾಗಿ ಉಳಿದಿದೆ.

Comments (0)

Your email address will not be published. Required fields are marked *

Back to top button