Top Newsರಾಜಕೀಯರಾಜ್ಯ

ಬಿಜೆಪಿ-ಜೆಡಿಎಸ್ ದೋಸ್ತಿ ಗಟ್ಟಿಯಾಗಿಸಲು ಸಮನ್ವಯ ಸಭೆ; ಮೈತ್ರಿ ಗೊಂದಲಕ್ಕೆ ಶೀಘ್ರವೇ ಮುಕ್ತಿ

ಬೆಂಗಳೂರು: ಬಿಜೆಪಿ ಮತ್ತು ಜೆಡಿಎಸ್ ನಾಯಕರು ಮಹತ್ವದ ಸಮನ್ವಯ ಸಭೆ ನಡೆಸಲು ಸಿದ್ಧತೆ ನಡೆಸುತ್ತಿದ್ದಾರೆ. ಮುಂಬರುವ ಸ್ಥಳೀಯ ಸಂಸ್ಥೆ ಚುನಾವಣೆ ಹಾಗೂ ಮೈತ್ರಿ ವಿಚಾರದಲ್ಲಿ ಉಂಟಾಗಿರುವ ಸಣ್ಣಪುಟ್ಟ ಗೊಂದಲಗಳನ್ನು ಬಗೆಹರಿಸುವುದು ಈ ಸಭೆಯ ಮುಖ್ಯ ಉದ್ದೇಶವಾಗಿದೆ. ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ, ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಮತ್ತು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ನೇತೃತ್ವದಲ್ಲಿ ಈ ಸಭೆ ನಡೆಯಲಿದ್ದು, ಉಭಯ ಪಕ್ಷಗಳ ನಡುವಿನ ಭಿನ್ನಾಭಿಪ್ರಾಯಗಳನ್ನು ನಿವಾರಿಸಿ ಒಮ್ಮತದ ನಿರ್ಧಾರಕ್ಕೆ ಬರಲು ನಾಯಕರು ಮುಂದಾಗಿದ್ದಾರೆ.

ಮೈತ್ರಿ ನಾಯಕರು ವಿಭಿನ್ನ ಹೇಳಿಕೆಗಳನ್ನು ನೀಡುತ್ತಿರುವುದು ಕಾಂಗ್ರೆಸ್ ಪಕ್ಷಕ್ಕೆ ರಾಜಕೀಯ ಅಸ್ತ್ರವಾಗುವ ಸಾಧ್ಯತೆ ಇರುವುದರಿಂದ, ಅಂತಹ ಪರಿಸ್ಥಿತಿಯನ್ನು ತಪ್ಪಿಸಲು ಈ ಸಭೆ ಪೂರಕವಾಗಲಿದೆ. ಜಿಬಿಎ ಚುನಾವಣೆಯ ಮೈತ್ರಿ ಕುರಿತು ಮಾತನಾಡಿದ್ದ ಆರ್. ಅಶೋಕ್, “ಹೆಚ್.ಡಿ. ಕುಮಾರಸ್ವಾಮಿ ಅವರೊಂದಿಗೆ ಮಾತುಕತೆ ನಡೆಸಲಾಗಿದ್ದು, ಹೊಂದಾಣಿಕೆ ಸುಲಲಿತವಾಗಿ ನಡೆಯಲಿದೆ. ನಮ್ಮ ನಡುವೆ ಯಾವುದೇ ದೊಡ್ಡ ಸಮಸ್ಯೆಗಳಿಲ್ಲ, ಹೈಕಮಾಂಡ್ ತೀರ್ಮಾನವೇ ಅಂತಿಮ,” ಎಂದು ಸ್ಪಷ್ಟಪಡಿಸಿದ್ದಾರೆ. ಈ ಮೂಲಕ ಮೈತ್ರಿಯಲ್ಲಿನ ಸಣ್ಣಪುಟ್ಟ ವಿರಸಗಳನ್ನು ಶೀಘ್ರವೇ ಬಗೆಹರಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಅತ್ತ ಹೆಚ್.ಡಿ. ಕುಮಾರಸ್ವಾಮಿ ಅವರು ಸಹ ಮೈತ್ರಿಯ ಬದ್ಧತೆಯನ್ನು ಪುನರುಚ್ಚರಿಸಿದ್ದು, “ಬಿಜೆಪಿ-ಜೆಡಿಎಸ್ ಮೈತ್ರಿಯಲ್ಲಿ ಯಾವುದೇ ಲೋಪಗಳಿಲ್ಲ. ನಾವು ರಾಷ್ಟ್ರಮಟ್ಟದಲ್ಲಿ ಎನ್‌ಡಿಎ ಭಾಗವಾಗಿರುವುದರಿಂದ ಗೊಂದಲಗಳಿಗೆ ಆಸ್ಪದವಿಲ್ಲ,” ಎಂದು ಹೇಳಿದ್ದಾರೆ. ಅಭಿಮಾನಿಗಳು ಮುಂದಿನ ಸಿಎಂ ಎಂದು ಕೂಗುವ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, “ಕೂಸು ಹುಟ್ಟುವ ಮುನ್ನವೇ ಕುಲಾವಿ ಹೊಲಿಸಿದಂತಾಗಬಾರದು. ಯಾರ ಹಣೆಯಲ್ಲಿ ಏನು ಬರೆದಿದೆಯೋ ಹಾಗೆಯೇ ಆಗುತ್ತದೆ. ಸದ್ಯಕ್ಕೆ ನನ್ನ ಮೊದಲ ಆದ್ಯತೆ ರಾಜ್ಯದಲ್ಲಿರುವ ಸರ್ಕಾರವನ್ನು ಬದಲಿಸುವುದು, ಅದಕ್ಕಾಗಿ ಮೈತ್ರಿ ಮುಂದುವರಿಯುವುದು ಅನಿವಾರ್ಯ ಎಂದು ನುಡಿದಿದ್ದಾರೆ.

ಸ್ಥಳೀಯ ಮಟ್ಟದಲ್ಲಿ ಕಾರ್ಯಕರ್ತರ ನಡುವೆ ಇರಬಹುದಾದ ಗೊಂದಲಗಳನ್ನು ನಿವಾರಿಸಿ, ಮುಂಬರುವ ಚುನಾವಣೆಯನ್ನು ಒಗ್ಗಟ್ಟಿನಿಂದ ಎದುರಿಸಲು ಮೈತ್ರಿ ನಾಯಕರು ಈ ಸಮನ್ವಯ ಸಭೆಯ ಮೂಲಕ ರಣತಂತ್ರ ರೂಪಿಸುತ್ತಿದ್ದಾರೆ. ಸರ್ಕಾರದ ವಿರುದ್ಧದ ಹೋರಾಟವನ್ನು ತೀವ್ರಗೊಳಿಸಲು ಮತ್ತು ಚುನಾವಣಾ ಗೆಲುವಿಗಾಗಿ ಉಭಯ ಪಕ್ಷಗಳ ನಾಯಕರು ಶೀಘ್ರದಲ್ಲೇ ಒಂದು ವೇದಿಕೆಯಲ್ಲಿ ಕುಳಿತು ಅಂತಿಮ ತೀರ್ಮಾನ ಕೈಗೊಳ್ಳಲಿದ್ದಾರೆ.

Comments (0)

Your email address will not be published. Required fields are marked *

Back to top button