Top Newsರಾಜ್ಯಸುದ್ದಿ

ನೌಕಾಪಡೆಯ ಮಾಹಿತಿ ಸೋರಿಕೆ ; ಉಡುಪಿಯಲ್ಲಿ ಮತ್ತೊಬ್ಬ ಆರೋಪಿಯ ಬಂಧನ

ಉಡುಪಿ : ಭಾರತೀಯ ನೌಕಾಪಡೆಗೆ ಸಂಬಂಧಿಸಿದ ಅತ್ಯಂತ ಗೌಪ್ಯ ಹಾಗೂ ರಹಸ್ಯ ಮಾಹಿತಿಗಳನ್ನು ಪಾಕಿಸ್ತಾನಕ್ಕೆ ಸೋರಿಕೆ ಮಾಡಿದ ಆರೋಪದ ಮೇಲೆ ಉಡುಪಿ ಪೊಲೀಸರು ಪಶ್ಚಿಮ ಬಂಗಾಳ ಮೂಲದ ಆಲಿಫ್ ಇಸ್ಲಾಂ ಎಂಬುವವನನ್ನು ಬಂಧಿಸಿದ್ದಾರೆ. ಬಂಧಿತ 21 ವರ್ಷದ ಯುವಕ ಮೂಲತಃ ಬಾಂಗ್ಲಾದೇಶದ ಪ್ರಜೆಯಾಗಿರಬಹುದು ಎಂಬ ಬಲವಾದ ಶಂಕೆ ವ್ಯಕ್ತವಾಗಿದ್ದು, ಈ ನಿಟ್ಟಿನಲ್ಲಿ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ.

ಮಲ್ಪೆ ಬಂದರಿನ ಕೊಚ್ಚಿನ್ ಶಿಪ್ ಯಾರ್ಡ್‌ನಲ್ಲಿ ಕೆಲಸ ಮಾಡುತ್ತಿದ್ದ ನೌಕರರು ನೌಕಾಪಡೆಯ ಹಡಗುಗಳ ಸಂಖ್ಯೆ, ತಾಂತ್ರಿಕ ವಿವರಗಳು ಮತ್ತು ಇತರ ರಹಸ್ಯ ಮಾಹಿತಿಯನ್ನು ವಾಟ್ಸ್​ಆ್ಯಪ್ ಹಾಗೂ ಫೇಸ್‌ಬುಕ್ ಮೂಲಕ ಪಾಕಿಸ್ತಾನದ ಏಜೆಂಟ್‌ಗಳ ಜೊತೆ ಹಂಚಿಕೊಳ್ಳುತ್ತಿದ್ದರು ಎಂಬುದು ತನಿಖೆಯಲ್ಲಿ ತಿಳಿದುಬಂದಿದೆ. ಈ ಆರೋಪಿಗಳು ಕಳೆದ ಒಂದೂವರೆ ವರ್ಷಗಳಿಂದ ಇಂತಹ ದೇಶದ್ರೋಹಿ ಚಟುವಟಿಕೆಯಲ್ಲಿ ತೊಡಗಿದ್ದರು ಎನ್ನಲಾಗಿದೆ. ಈಗಾಗಲೇ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಗುಜರಾತ್ ಮೂಲದ ಹಿರೇಂದ್ರ ಕುಮಾರ್, ಉತ್ತರ ಪ್ರದೇಶದ ರೋಹಿತ್ ಮತ್ತು ಸಂತ್ರಿ ಎಂಬವರನ್ನು ಕಳೆದ ವರ್ಷದ ಅಂತ್ಯದಲ್ಲಿ ಬಂಧಿಸಲಾಗಿತ್ತು.

ಕೊಚ್ಚಿನ್ ಶಿಪ್ ಯಾರ್ಡ್ ಸಂಸ್ಥೆಯು ಭಾರತೀಯ ನೌಕಾಪಡೆಗೆ ಅಗತ್ಯವಿರುವ ಟಗ್‌ಗಳು ಹಾಗೂ ಹಡಗುಗಳನ್ನು ನಿರ್ಮಿಸಿಕೊಡುವ ಪ್ರಮುಖ ಜವಾಬ್ದಾರಿಯನ್ನು ಹೊಂದಿದೆ. ಇಂತಹ ಸೂಕ್ಷ್ಮ ಪ್ರದೇಶದಲ್ಲಿ ಕೆಲಸ ಮಾಡುತ್ತಿದ್ದವರೇ ಮಾಹಿತಿ ಸೋರಿಕೆ ಮಾಡಿರುವುದು ರಾಷ್ಟ್ರೀಯ ಭದ್ರತೆಯ ದೃಷ್ಟಿಯಿಂದ ಆತಂಕಕಾರಿ ವಿಷಯವಾಗಿದೆ. ಪ್ರಸ್ತುತ ಈ ಜಾಲದ ಹಿಂದಿರುವ ಮತ್ತೊಬ್ಬ ಪ್ರಮುಖ ಆರೋಪಿ ಹಾಗೂ ಈ ಕೃತ್ಯಕ್ಕೆ ಬಳಸಲಾದ ಫೇಸ್‌ಬುಕ್ ಪೇಜ್ ಅಡ್ಮಿನ್ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

Comments (0)

Your email address will not be published. Required fields are marked *

Back to top button