ಹಾವೇರಿ: ಕರ್ನಾಟಕ ರಾಜ್ಯ ಕಾಂಗ್ರೆಸ್ ಸರ್ಕಾರವು ತನ್ನ ಆಡಳಿತದ 1000 ದಿನಗಳನ್ನು ಪೂರೈಸಿದ ಸಂಭ್ರಮದಲ್ಲಿದ್ದು, ಈ ಐತಿಹಾಸಿಕ ಮೈಲಿಗಲ್ಲಿನ ಅಂಗವಾಗಿ ಹಾವೇರಿ ನಗರದ ಹೊರವಲಯದ ಅಜ್ಜಯ್ಯ ದೇವಸ್ಥಾನದ ಬಳಿ ಬೃಹತ್ ‘ಭೂ ಗ್ಯಾರಂಟಿ ಸಮರ್ಪಣಾ ಸಮಾವೇಶವನ್ನು ಆಯೋಜಿಸಿದೆ. ಈ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸಿರಿಧಾನ್ಯಗಳ ನಾಮಫಲಕದ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಇದೇ ಸಂದರ್ಭದಲ್ಲಿ ಭೂ ಗ್ಯಾರಂಟಿ ಪುಸ್ತಕವನ್ನು ಬಿಡುಗಡೆ ಮಾಡುವುದರ ಜೊತೆಗೆ, ಜನಪರ ಕಾರ್ಯಗಳಲ್ಲಿ ಶ್ರಮಿಸಿದ ತಹಶೀಲ್ದಾರ್ಗಳನ್ನು ಗೌರವಿಸಲಾಯಿತು.
ಈ ಸಮಾವೇಶದ ಪ್ರಮುಖ ಆಕರ್ಷಣೆಯಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ಥಳಿಯನ್ನು ಅನಾವರಣಗೊಳಿಸಲಾಯಿತು. ವಿಧಾನಸೌಧದ ಮುಂಭಾಗದಲ್ಲಿ ಮುಖ್ಯಮಂತ್ರಿಗಳು ನಿಂತಿರುವ ಭಂಗಿಯಲ್ಲಿರುವ ಈ ಪುತ್ಥಳಿಯನ್ನು ಗೊಟಗೋಡಿ ರಾಕ್ ಗಾರ್ಡನ್ ಮುಖ್ಯಸ್ಥ ದಾಸನೂರ್ ಅವರು ಕೊಡುಗೆಯಾಗಿ ನೀಡಿದ್ದಾರೆ. ಪುತ್ಥಳಿಯನ್ನು ಕಂಡು ಉಪಮುಖ್ಯಮಂತ್ರಿಗಳು ಮಂದಹಾಸ ಬೀರಿದ್ದು, ದಾನಿ ದಾಸನೂರ್ ಅವರನ್ನು ವೇದಿಕೆಯ ಮೇಲೆ ಅಭಿನಂದಿಸಲಾಯಿತು. ಸಮಾವೇಶದಲ್ಲಿ ಸಚಿವರಾದ ಸತೀಶ್ ಜಾರಕಿಹೋಳಿ, ಹೆಚ್.ಕೆ. ಪಾಟೀಲ್ ಮತ್ತು ಶಿವಾನಂದ ಪಾಟೀಲ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಸರ್ಕಾರದ ಸಾಧನೆಯ ಸಂಕೇತವಾಗಿ ರಾಜ್ಯದ 9 ಜಿಲ್ಲೆಗಳ ಸುಮಾರು ಒಂದು ಲಕ್ಷ ಕುಟುಂಬಗಳಿಗೆ ಹಕ್ಕು ಪತ್ರಗಳನ್ನು ವಿತರಿಸಲಾಗುತ್ತಿದೆ. ಕಾರ್ಯಕ್ರಮಕ್ಕೆ ಆಗಮಿಸಿದ ಸುಮಾರು ಒಂದೂವರೆ ಲಕ್ಷ ಜನರಿಗಾಗಿ ಭರ್ಜರಿ ಭೋಜನದ ವ್ಯವಸ್ಥೆ ಮಾಡಲಾಗಿದ್ದು, ಹುಬ್ಬಳ್ಳಿಯ ಅನ್ನಪೂರ್ಣೇಶ್ವರಿ ಕ್ಯಾಟರಿಂಗ್ ಸರ್ವಿಸ್ನ ಒಂದು ಸಾವಿರ ಬಾಣಸಿಗರು ಅಡುಗೆ ತಯಾರಿಸಿದ್ದಾರೆ. ಪಲಾವ್, ಮೊಸರನ್ನ, ಬೊಂದಿ ಲಾಡು ಮತ್ತು ಮಜ್ಜಿಗೆಯನ್ನು ಒಳಗೊಂಡ ಈ ಭೋಜನವನ್ನು 120 ಕೌಂಟರ್ಗಳ ಮೂಲಕ ವ್ಯವಸ್ಥಿತವಾಗಿ ವಿತರಿಸಲು ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದೆ. ಇಡೀ ಕಾರ್ಯಕ್ರಮದ ಸುಗಮ ನಿರ್ವಹಣೆಗಾಗಿ ಮೂರು ಸಾವಿರಕ್ಕೂ ಅಧಿಕ ಪೊಲೀಸ್ ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಲಾಗಿದೆ.


