ರಾಜ್ಯವೈರಲ್ ನ್ಯೂಸ್ಸುದ್ದಿ

5 ಜೀವ ಉಳಿಸಿ ಅಮರಳಾದ ದೇಶದ ಅತ್ಯಂತ ಕಿರಿಯ ಅಂಗಾಂಗ ದಾನಿ ಅಲಿನ್ ಶೆರಿನ್!

ಕೇರಳ: ಅಂಬೆಗಾಲಿಡುತ್ತಿದ್ದ ಹತ್ತು ತಿಂಗಳ ಹಸುಗೂಸು ಸಾವಿನಲ್ಲೂ ಸಾರ್ಥಕತೆ ಮೆರೆದ ಹೃದಯವಿದ್ರಾವಕ ಹಾಗೂ ಸ್ಫೂರ್ತಿದಾಯಕ ಘಟನೆ ಕೇರಳದಲ್ಲಿ ನಡೆದಿದೆ. ಅಪಘಾತದಲ್ಲಿ ತಮ್ಮ ಏಕೈಕ ಪುತ್ರಿ ಅಲಿನ್ ಶೆರಿನ್ ಅಬ್ರಹಾಂಳನ್ನು ಕಳೆದುಕೊಂಡ ದಂಪತಿ ಅರುಣ್ ಮತ್ತು ಶೆರಿನ್, ತಮ್ಮ ಮಗು ಇನ್ನೈದು ಮಕ್ಕಳ ರೂಪದಲ್ಲಿ ಬದುಕಲಿ ಎಂಬ ಮಹಾನ್ ಉದ್ದೇಶದಿಂದ ಅಂಗಾಂಗ ದಾನ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಕೇವಲ 10 ತಿಂಗಳ ಪ್ರಾಯದ ಅಲಿನ್ ಶೆರಿನ್ ಈಗ ದೇಶದ ಅತ್ಯಂತ ಕಿರಿಯ ಅಂಗಾಂಗ ದಾನಿ ಎಂಬ ಹೆಗ್ಗಳಿಕೆಗೆ ಪಾತ್ರಳಾಗಿದ್ದು, ಐವರು ಪುಟ್ಟ ಮಕ್ಕಳ ಬಾಳಿಗೆ ಬೆಳಕಾಗಿದ್ದಾಳೆ.

ಕಳೆದ ಫೆಬ್ರವರಿ 5 ರಂದು ಕೊಟ್ಟಾಯಂನಿಂದ ತಿರುವಲ್ಲಾಗೆ ಪ್ರಯಾಣಿಸುತ್ತಿದ್ದಾಗ ಸಂಭವಿಸಿದ ಭೀಕರ ಕಾರು ಅಪಘಾತದಲ್ಲಿ ಅಲಿನ್‌ಗೆ ಗಂಭೀರ ಗಾಯಗಳಾಗಿದ್ದವು. ಕುಟುಂಬದ ಉಳಿದ ಸದಸ್ಯರು ಪ್ರಾಣಾಪಾಯದಿಂದ ಪಾರಾಗಿದ್ದರೂ, ಮಗುವಿನ ಮಿದುಳು ನಿಷ್ಕ್ರಿಯಗೊಂಡಿರುವುದಾಗಿ ವೈದ್ಯರು ತಿಳಿಸಿದ್ದರು. ಮಗಳನ್ನು ಉಳಿಸಿಕೊಳ್ಳಲು ಪೋಷಕರು ಮತ್ತು ವೈದ್ಯರು ನಡೆಸಿದ ಎಲ್ಲಾ ಪ್ರಯತ್ನಗಳು ವಿಫಲವಾಗಿ, ಫೆಬ್ರವರಿ 10 ರಂದು ಅಲಿನ್ ಕೊನೆಯುಸಿರೆಳೆದಿದ್ದಾಳೆ. ಮಗಳ ಅಗಲಿಕೆಯ ಅತೀವ ದುಃಖದ ನಡುವೆಯೂ, ಆಕೆಯ ಅಂಗಾಂಗಗಳು ವ್ಯರ್ಥವಾಗಬಾರದೆಂದು ಪೋಷಕರು ತೆಗೆದುಕೊಂಡ ನಿರ್ಧಾರ ಈಗ ಇಡೀ ದೇಶದ ಮೆಚ್ಚುಗೆಗೆ ಪಾತ್ರವಾಗಿದೆ.

ಅಲಿನ್ ಶೆರಿನ್ ಅವರ ಹೃದಯ, ಕಿಡ್ನಿ ಮತ್ತು ಕಣ್ಣುಗಳನ್ನು ಕೇರಳದ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಐವರು ಮಕ್ಕಳಿಗೆ ದಾನ ಮಾಡಲಾಗಿದೆ. ಕೊಚ್ಚಿಯ ಅಮೃತಾ ಆಸ್ಪತ್ರೆಯಿಂದ ತಿರುವನಂತಪುರದ ಆಸ್ಪತ್ರೆಗಳಿಗೆ ಅಂಗಾಂಗಗಳನ್ನು ಕ್ಷಿಪ್ರವಾಗಿ ರವಾನಿಸಲು ಪೊಲೀಸರು ಗ್ರೀನ್ ಕಾರಿಡಾರ್ ವ್ಯವಸ್ಥೆ ಮಾಡಿದ್ದರು. ಪ್ರಪಂಚವನ್ನೇ ಸರಿಯಾಗಿ ನೋಡದ ಈ ಪುಟಾಣಿ ಕಂದಮ್ಮ, ಹೋಗುವಾಗ ಐದು ಜೀವಗಳನ್ನು ಉಳಿಸಿ ಅಮರಳಾಗಿದ್ದಾಳೆ. ದುಃಖದ ಮಡುವಿನಲ್ಲೂ ಸಮಾಜಕ್ಕೆ ಮಾದರಿಯಾದ ಅರುಣ್-ಶೆರಿನ್ ದಂಪತಿಯ ಈ ಕಾರ್ಯ ನಿಜಕ್ಕೂ ಶ್ಲಾಘನೀಯ.

Comments (0)

Your email address will not be published. Required fields are marked *

Back to top button