Wednesday, February 11, 2026
26.3 C
Bengaluru
Google search engine
LIVE
ಮನೆಜಿಲ್ಲೆಮಾದಪ್ಪನ ಬೆಟ್ಟಕ್ಕೆ ಕಾಲ್ನಡಿಗೆಯ ದಂಡು; ಕಾವೇರಿ ನದಿ ದಾಟಿ ಭಕ್ತರ ಪಾದಯಾತ್ರೆ

ಮಾದಪ್ಪನ ಬೆಟ್ಟಕ್ಕೆ ಕಾಲ್ನಡಿಗೆಯ ದಂಡು; ಕಾವೇರಿ ನದಿ ದಾಟಿ ಭಕ್ತರ ಪಾದಯಾತ್ರೆ

ಮಲೆ ಮಹದೇಶ್ವರ ಬೆಟ್ಟದ ಶಿವರಾತ್ರಿ ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ಭಕ್ತರ ಪಾದಯಾತ್ರೆ ಭರದಿಂದ ಸಾಗುತ್ತಿದೆ. ಸಾವಿರಾರು ಭಕ್ತರು ಇಂದು ಎರಡನೇ ದಿನವೂ ತಮ್ಮ ಪಾದಯಾತ್ರೆಯನ್ನು ಮುಂದುವರಿಸಿದ್ದಾರೆ. ಬೆಂಗಳೂರು, ತುಮಕೂರು, ಕೋಲಾರ ಮತ್ತು ರಾಮನಗರ ಜಿಲ್ಲೆಗಳಿಂದ ಆಗಮಿಸಿರುವ ಸಾವಿರಾರು ಮಾದಪ್ಪನ ಭಕ್ತರು, ಕನಕಪುರ ತಾಲೂಕಿನ ಸಂಗಮ ಅರಣ್ಯ ಪ್ರದೇಶದಲ್ಲಿ ಹರಿಯುವ ಕಾವೇರಿ ನದಿಯನ್ನು ದಾಟಿ ಭಕ್ತಿಭಾವದಿಂದ ಸಾಗುತ್ತಿದ್ದಾರೆ.

ಅರಣ್ಯ ಪ್ರದೇಶ ಮತ್ತು ನದಿ ದಾಟುವ ವೇಳೆ ಭಕ್ತರ ರಕ್ಷಣೆಗಾಗಿ ತಾಲೂಕು ಆಡಳಿತವು ಬಿಗಿ ಕ್ರಮಗಳನ್ನು ಕೈಗೊಂಡಿದೆ. ಎಸ್‌ಡಿಆರ್‌ಎಫ್ ತಂಡ, ಅಗ್ನಿಶಾಮಕ ಸಿಬ್ಬಂದಿ ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿ ಸ್ಥಳದಲ್ಲೇ ಬೀಡುಬಿಟ್ಟಿದ್ದು, ಭಕ್ತರನ್ನು ಸುರಕ್ಷಿತವಾಗಿ ನದಿ ದಾಟಿಸಲು ನೆರವಾಗುತ್ತಿದ್ದಾರೆ. ವನ್ಯಜೀವಿಗಳ ಭಯವಿರುವುದರಿಂದ ಅರಣ್ಯ ಪ್ರದೇಶದಲ್ಲಿ ಬೆಳಿಗ್ಗೆ 7 ರಿಂದ ಸಂಜೆ 6 ರವರೆಗೆ ಮಾತ್ರ ಪಾದಯಾತ್ರೆಗೆ ಅವಕಾಶ ನೀಡಲಾಗಿದೆ. ನಾಳೆ ಸಂಜೆವರೆಗೆ ಮಾತ್ರ ಅರಣ್ಯ ಮಾರ್ಗದ ಮೂಲಕ ತೆರಳಲು ಅನುಮತಿ ನೀಡಲಾಗಿದೆ.

ಪಾದಯಾತ್ರೆ ಮಾಡುವ ಭಕ್ತರಿಗಾಗಿ ದಾರಿಯುದ್ದಕ್ಕೂ ಸುತ್ತಮುತ್ತಲ ಗ್ರಾಮಸ್ಥರು ಊಟ, ಉಪಹಾರ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಸಾವಿರಾರು ಸಂಖ್ಯೆಯಲ್ಲಿ ‘ಮಾದಪ್ಪನ’ ಜೈಕಾರ ಕೂಗುತ್ತಾ ಭಕ್ತರು ಕಾಡು-ಮೇಡುಗಳ ಹಾದಿಯಲ್ಲಿ ಸಾಗುತ್ತಿರುವುದು ಭಕ್ತಿಯ ಪರಾಕಾಷ್ಠೆಗೆ ಸಾಕ್ಷಿಯಾಗಿದೆ.

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments