ಕರ್ನಾಟಕ ಕಾಂಗ್ರೆಸ್ನಲ್ಲಿ ನಾಯಕತ್ವ ಬದಲಾವಣೆ ಮತ್ತು ಅಧಿಕಾರ ಹಂಚಿಕೆಯ ಕಿಚ್ಚು ಮತ್ತೆ ಜೋರಾಗಿದ್ದು, ರಾಜಕೀಯ ಸಂಚಲನ ಮೂಡಿಸಿದೆ. ರಾಜ್ಯ ಕಾಂಗ್ರೆಸ್ನಲ್ಲಿ ಬೂದಿ ಮುಚ್ಚಿದ ಕೆಂಡದಂತಿದ್ದ ನಾಯಕತ್ವ ಬದಲಾವಣೆಯ ವಿಚಾರ ಇದೀಗ ಬಹಿರಂಗವಾಗಿಯೇ ಸ್ಫೋಟಗೊಂಡಿದೆ.

ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಹೈಕಮಾಂಡ್ ನಾಯಕರನ್ನು ಭೇಟಿಯಾಗಲು ದೆಹಲಿಗೆ ತೆರಳಿದ್ದು, ರಾಹುಲ್ ಗಾಂಧಿ ಅವರೊಂದಿಗೆ ಚರ್ಚಿಸಲು ಸತತ ಪ್ರಯತ್ನ ನಡೆಸುತ್ತಿದ್ದಾರೆ. ದೆಹಲಿಯಲ್ಲಿ ಈ ಬೆಳವಣಿಗೆಗಳು ನಡೆಯುತ್ತಿದ್ದರೆ, ಇತ್ತ ರಾಜ್ಯದಲ್ಲಿ ಡಿ.ಕೆ. ಸುರೇಶ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ‘ಅಧಿಕಾರ ಹಂಚಿಕೆಯ’ ಭರವಸೆಯನ್ನು ನೆನಪಿಸಿದ್ದಾರೆ.
ನಾಯಕತ್ವ ಬದಲಾವಣೆ ಕುರಿತು ಮಾತನಾಡಿದ ಮಾಜಿ ಸಂಸದ ಡಿ.ಕೆ. ಸುರೇಶ್, “ಸಿದ್ದರಾಮಯ್ಯ ಅವರು ನೀಡಿದ ಮಾತನ್ನು ಉಳಿಸಿಕೊಳ್ಳುತ್ತಾರೆ ಎಂಬ ಭರವಸೆ ನನಗಿನ್ನೂ ಇದೆ. ಅದು ಸ್ವಲ್ಪ ನಿಧಾನವಾದರೂ ಪರವಾಗಿಲ್ಲ, ಅವರು ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತಾರೆಂಬ ವಿಶ್ವಾಸವಿದೆ,” ಎಂದು ಮಾರ್ಮಿಕವಾಗಿ ಹೇಳುವ ಮೂಲಕ ಪವರ್ ಶೇರಿಂಗ್ ಒಪ್ಪಂದದ ಬಗ್ಗೆ ಪರೋಕ್ಷವಾಗಿ ಒತ್ತಡ ಹೇರಿದ್ದಾರೆ.

ಶಾಸಕರನ್ನು ವಿದೇಶ ಪ್ರವಾಸಕ್ಕೆ ಕಳುಹಿಸುವ ವಿಚಾರದ ಬಗ್ಗೆ ಸ್ಪಷ್ಟನೆ ನೀಡಿದ ಸುರೇಶ್, ವಿದೇಶ ಪ್ರವಾಸಕ್ಕೂ ಡಿ.ಕೆ. ಶಿವಕುಮಾರ್ ಅವರಿಗೂ ಯಾವುದೇ ಸಂಬಂಧವಿಲ್ಲ. ನಾವು ಯಾರನ್ನೂ ವಿದೇಶಕ್ಕೆ ಕಳುಹಿಸುತ್ತಿಲ್ಲ. ಯಾರು ಹೋಗುತ್ತಿದ್ದಾರೋ ಅವರನ್ನೇ ಕೇಳಬೇಕು. ಇದನ್ನು ಡಿಕೆಶಿ ಆಯೋಜಿಸಿದ್ದಾರೆ ಎಂಬುದು ತಪ್ಪು, ಎಂದು ಸ್ಪಷ್ಟಪಡಿಸಿದರು.


