Top Newsದೇಶ/ವಿದೇಶಸುದ್ದಿ

ರಣವೀರ್ ಸಿಂಗ್‌ಗೆ ಬಂತು ‘ವಾಟ್ಸಾಪ್’ ಬೆದರಿಕೆ; ಮುಂಬೈ ನಿವಾಸದಲ್ಲಿ ಪೊಲೀಸ್ ಕಣ್ಗಾವಲು

ಬಾಲಿವುಡ್ ನಟ ರಣವೀರ್ ಸಿಂಗ್ ಅವರಿಗೆ ವಾಟ್ಸಾಪ್ ಮೂಲಕ ಬೆದರಿಕೆ ಸಂದೇಶ ಬಂದಿದ್ದು, ಮುಂಬೈನಲ್ಲಿರುವ ನಿವಾಸಕ್ಕೆ ಪೊಲೀಸರು ತಕ್ಷಣವೇ ಸಶಸ್ತ್ರ ಭದ್ರತೆಯನ್ನು ಒದಗಿಸಿದ್ದಾರೆ. ಮುಂಬರುವ ‘ಧುರಂಧರ್ 2’ ಚಿತ್ರದ ಕೆಲಸಗಳಲ್ಲಿ ಬ್ಯುಸಿಯಾಗಿರುವ ರಣವೀರ್ ಅವರಿಗೆ ಅಪರಿಚಿತ ವ್ಯಕ್ತಿಯೊಬ್ಬ ವಾಟ್ಸಾಪ್ ವಾಯ್ಸ್ ನೋಟ್ ಕಳುಹಿಸಿ, ಕೋಟ್ಯಂತರ ರೂಪಾಯಿ ಹಣ ನೀಡುವಂತೆ ಬೇಡಿಕೆ ಇಟ್ಟಿದ್ದಾನೆ. ಹಣ ನೀಡದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ ಎಂಬ ಎಚ್ಚರಿಕೆ ನೀಡಿದ್ದಾನೆ ಎನ್ನಲಾಗಿದೆ .

ನಿರ್ದೇಶಕ ರೋಹಿತ್ ಶೆಟ್ಟಿ ಅವರ ಜುಹುವಿನ ಮನೆಯ ಬಳಿ ಇತ್ತೀಚೆಗೆ ನಡೆದ ಗುಂಡಿನ ದಾಳಿಯ ಬೆನ್ನಲ್ಲೇ ಈ ಘಟನೆ ನಡೆದಿರುವುದು ಬಾಲಿವುಡ್ ವಲಯದಲ್ಲಿ ಆತಂಕ ಮೂಡಿಸಿದೆ. ಹಳೆಯ ಕಾಲದ ಭೂಗತ ಲೋಕದ ಬೆದರಿಕೆಗಳು ಮತ್ತೆ ಮರುಕಳಿಸುತ್ತಿವೆಯೇ ಎಂಬ ಪ್ರಶ್ನೆಯನ್ನು ಇದು ಹುಟ್ಟುಹಾಕಿದೆ. ರಣವೀರ್ ದೂರು ನೀಡಿದ ಕೂಡಲೇ ಮುಂಬೈ ಪೊಲೀಸರು ಸೈಬರ್ ಸೆಲ್ ಮತ್ತು ಅಪರಾಧ ವಿಭಾಗದ ನೆರವು ಪಡೆದು ತನಿಖೆ ಚುರುಕುಗೊಳಿಸಿದ್ದಾರೆ.

ನಟನ ಮನೆಗೆ ಒದಗಿಸಲಾದ ಈ ಬಿಗಿ ಭದ್ರತೆಯು ದೀಪಿಕಾ ಮತ್ತು ರಣವೀರ್ ವಾಸಿಸುವ ಅಪಾರ್ಟ್‌ಮೆಂಟ್‌ನ ಇತರ ನಿವಾಸಿಗಳಿಗೆ ತಲೆನೋವಾಗಿ ಪರಿಣಮಿಸಿದೆ. ಸದಾ ಶಸ್ತ್ರಸಜ್ಜಿತ ಪೊಲೀಸರು ಮನೆಯ ಮುಂದೆ ಇರುವುದರಿಂದ ದೈನಂದಿನ ಜೀವನಕ್ಕೆ ತೊಂದರೆಯಾಗುತ್ತಿದೆ ಎಂದು ಸೊಸೈಟಿ ಆಡಳಿತವು ಪೊಲೀಸರಿಗೆ ಪತ್ರ ಬರೆದಿದೆ. ಭದ್ರತೆಯ ಹೆಸರಿನಲ್ಲಿ ತಮಗೆ ಮುಜುಗರವಾಗುತ್ತಿದೆ ಎಂದು ನಿವಾಸಿಗಳು ಅಸಮಾಧಾನ ವ್ಯಕ್ತಪಡಿಸಿದ್ದು, ಇದು ನಟನ ಮೇಲೆ ಮನೆ ಬದಲಿಸುವಂತೆ ಒತ್ತಡ ಹೇರಬಹುದು ಎಂಬ ಚರ್ಚೆ ಶುರುವಾಗಿದೆ.

Comments (0)

Your email address will not be published. Required fields are marked *

Back to top button