Top Newsರಾಜಕೀಯರಾಜ್ಯಸುದ್ದಿ

ಕದ್ದುಮುಚ್ಚಿ ಮಾತನಾಡಿಲ್ಲ, ಗೊಂದಲ ನನಗಿಲ್ಲ; ಡಿಕೆ ಶಿವಕುಮಾರ್ ಮಾರ್ಮಿಕ ನುಡಿ!

ರಾಜ್ಯ ರಾಜಕಾರಣದ ನಾಯಕತ್ವ ಬದಲಾವಣೆ ಮತ್ತು ಆಂತರಿಕ ಭಿನ್ನಾಭಿಪ್ರಾಯಗಳ ಚರ್ಚೆಯ ನಡುವೆಯೇ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ದೆಹಲಿಗೆ ಪ್ರಯಾಣ ಬೆಳೆಸಿದ್ದು, ಕುತೂಹಲಕಾರಿ ಹೇಳಿಕೆಗಳನ್ನು ನೀಡಿದ್ದಾರೆ. ಸಿಎಂ ಸಿದ್ದರಾಮಯ್ಯ ಮತ್ತು ತಮ್ಮ ನಡುವೆ ಇರುವ ಮಾತುಕತೆಗಳ ಬಗ್ಗೆ ತಮಗೆ ಸ್ಪಷ್ಟ ಅರಿವಿದ್ದು, ತಾವು ಕದ್ದುಮುಚ್ಚಿ ಏನನ್ನೂ ಮಾಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಸದಾಶಿವನಗರದ ತಮ್ಮ ನಿವಾಸದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪಕ್ಷದ ಆಂತರಿಕ ವಿಚಾರಗಳ ಬಗ್ಗೆ ಅನಗತ್ಯ ಹೇಳಿಕೆ ನೀಡಿ ಗೊಂದಲ ಸೃಷ್ಟಿಸುವವರಿಗೆ ತಿರುಗೇಟು ನೀಡಿದ್ದಾರೆ.

ನಾಯಕತ್ವದ ವಿಚಾರವಾಗಿ ಸಚಿವರು ಅಥವಾ ಶಾಸಕರು ನೀಡುವ ಪರ-ವಿರೋಧದ ಹೇಳಿಕೆಗಳು ಪಕ್ಷಕ್ಕೆ ಹಾನಿ ಉಂಟುಮಾಡುತ್ತವೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಈಗಾಗಲೇ ಎಚ್ಚರಿಕೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಎಲ್ಲರೂ ಶಿಸ್ತು ಪಾಲಿಸಿ ಬಾಯಿ ಮುಚ್ಚಿಕೊಂಡಿರಬೇಕು ಎಂಬ ಸೂಚನೆಯನ್ನು ತಾವು ಪಾಲಿಸುತ್ತಿರುವುದಾಗಿ ತಿಳಿಸಿದರು. ಅಸ್ಸಾಂ ಚುನಾವಣೆ ಹಾಗೂ ಪಕ್ಷದ ಸಂಘಟನೆಗೆ ಸಂಬಂಧಿಸಿದಂತೆ ಹೈಕಮಾಂಡ್ ಕರೆ ನೀಡಿರುವ ಹಿನ್ನೆಲೆಯಲ್ಲಿ ದೆಹಲಿಗೆ ತೆರಳುತ್ತಿರುವುದಾಗಿ ಅವರು ತಮ್ಮ ಪ್ರವಾಸದ ಉದ್ದೇಶವನ್ನು ವಿವರಿಸಿದರು.

ಬಜೆಟ್ ಸಿದ್ಧತಾ ಸಭೆಗಳಿಗೆ ಗೈರಾಗುತ್ತಿರುವ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ಈ ಬಗ್ಗೆ ಮುಖ್ಯಮಂತ್ರಿಗಳ ಅನುಮತಿ ಪಡೆದಿದ್ದೇನೆ ಮತ್ತು ದೆಹಲಿಯಿಂದ ಬಂದ ನಂತರ ಈ ಬಗ್ಗೆ ಚರ್ಚಿಸುವುದಾಗಿ ತಿಳಿಸಿದರು. ದೆಹಲಿಯಿಂದ ‘ಶುಭ ಸುದ್ಧಿ’ ತರುತ್ತೀರಾ ಎಂಬ ಪ್ರಶ್ನೆಗೆ ಮಾರ್ಮಿಕವಾಗಿ ಉತ್ತರಿಸಿದ ಡಿಕೆಶಿ, ಪ್ರತಿದಿನವೂ ತಮಗೆ ಒಳ್ಳೆಯ ದಿನವೇ ಆಗಿದ್ದು, ಜನರ ಸಮಸ್ಯೆ ಬಗೆಹರಿಸುವ ಹಾದಿಯಲ್ಲಿ ಟೀಕೆಗಳನ್ನು ಎದುರಿಸುವುದು ಅನಿವಾರ್ಯ ಎಂದು ತಿಳಿಸಿದರು.

Comments (0)

Your email address will not be published. Required fields are marked *

Back to top button