
ದಾವಣಗೆರೆ:ಶಿಕ್ಷಣದ ಹಕ್ಕಿಗಾಗಿ ಸ್ವತಃ ತಂದೆಯ ವಿರುದ್ಧವೇ ಧೈರ್ಯದಿಂದ ದೂರು ನೀಡಿದ ವಿದ್ಯಾರ್ಥಿನಿಯ ಸಾಹಸ ಮತ್ತು ಆಕೆಗೆ ಬೆಂಬಲವಾಗಿ ನಿಂತ ಪೊಲೀಸರ ಮಾನವೀಯ ಕಾರ್ಯ ನ್ಯಾಮತಿ ತಾಲೂಕಿನ ಅರುಂಡಿ ಗ್ರಾಮದಲ್ಲಿ ನಡೆದಿದೆ. 10ನೇ ತರಗತಿಯಲ್ಲಿ ಓದುತ್ತಿರುವ ಈ ವಿದ್ಯಾರ್ಥಿನಿ, ತನ್ನ ವಿದ್ಯಾಭ್ಯಾಸಕ್ಕೆ ಅಡ್ಡಿಪಡಿಸುತ್ತಿದ್ದ ತಂದೆಯ ವಿರುದ್ಧ ತಿರುಗಿಬೀಳುವ ಮೂಲಕ ಸಮಾಜಕ್ಕೆ ದೊಡ್ಡ ಸಂದೇಶ ನೀಡಿದ್ದಾಳೆ. ಕುಡಿತದ ವ್ಯಸನಕ್ಕೆ ದಾಸನಾಗಿದ್ದ ತಂದೆ, ಮಗಳು ಶಾಲೆಗೆ ಹೋಗಬಾರದು ಎಂಬ ಹಠಕ್ಕೆ ಬಿದ್ದು ಆಕೆಯ ಪಠ್ಯಪುಸ್ತಕಗಳನ್ನೇ ಸುಟ್ಟುಹಾಕಿ ಅಮಾನವೀಯವಾಗಿ ವರ್ತಿಸಿದ್ದನು.
ತಂದೆಯ ಈ ದೌರ್ಜನ್ಯಕ್ಕೆ ಹೆದರದ ಬಾಲಕಿ, ಕೂಡಲೇ 112 ಸಹಾಯವಾಣಿಗೆ ಕರೆ ಮಾಡಿ ಪೊಲೀಸರ ನೆರವು ಕೋರಿದ್ದಾಳೆ. ಸ್ಥಳಕ್ಕೆ ಆಗಮಿಸಿದ 112 ಅಧಿಕಾರಿಗಳಾದ ಹೇಮರಾಜ್ ಮತ್ತು ರವಿಕುಮಾರ್, ಕುಡಿದು ಗಲಾಟೆ ಮಾಡುತ್ತಿದ್ದ ತಂದೆಗೆ ಸರಿಯಾದ ಪಾಠ ಕಲಿಸಿದ್ದಾರೆ. ಮಗಳ ಭವಿಷ್ಯದೊಂದಿಗೆ ಆಟವಾಡದಂತೆ ಎಚ್ಚರಿಕೆ ನೀಡಿದ್ದಲ್ಲದೆ, ಪುಸ್ತಕಗಳಿಲ್ಲದೆ ಕಂಗಾಲಾಗಿದ್ದ ವಿದ್ಯಾರ್ಥಿನಿಗೆ ತಕ್ಷಣವೇ ಹೊಸ ನೋಟ್ ಬುಕ್ ಮತ್ತು ಅಗತ್ಯ ಲೇಖನ ಸಾಮಗ್ರಿಗಳನ್ನು ಕೊಡಿಸಿ ಆಕೆಯ ಮುಖದಲ್ಲಿ ನಗು ಮೂಡಿಸಿದ್ದಾರೆ.
ನ್ಯಾಮತಿ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ರವಿ ಅವರು ಈ ಪ್ರಕರಣವನ್ನು ಕೇವಲ ದೂರು ಎಂದು ಪರಿಗಣಿಸದೆ, ವಿದ್ಯಾರ್ಥಿನಿಯ ವಿದ್ಯಾಭ್ಯಾಸ ಮುಂದುವರಿಯಲು ಹೆಚ್ಚಿನ ಆಸಕ್ತಿ ವಹಿಸಿದ್ದಾರೆ. ಆಕೆಗೆ ಅಗತ್ಯವಿರುವ ಎಲ್ಲಾ ಪಠ್ಯಪುಸ್ತಕಗಳನ್ನು ಒದಗಿಸಿ, ಶಾಲಾ ಶಿಕ್ಷಕರೊಂದಿಗೆ ಚರ್ಚಿಸಿ ಆಕೆಗೆ ಯಾವುದೇ ಶೈಕ್ಷಣಿಕ ತೊಂದರೆಯಾಗದಂತೆ ನೋಡಿಕೊಳ್ಳಲು ಮನವಿ ಮಾಡಿದ್ದಾರೆ. ಪೊಲೀಸರ ಈ ಸಮಯೋಚಿತ ಮತ್ತು ಕಾಳಜಿಯುತ ಕಾರ್ಯಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಸೇರಿದಂತೆ ಸಾರ್ವಜನಿಕ ವಲಯದಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.




