Top Newsಜಿಲ್ಲೆರಾಜ್ಯವೈರಲ್ ನ್ಯೂಸ್ಸುದ್ದಿ

ಬೀದರ್‌ ಭೂಗರ್ಭದಲ್ಲಿ ಚಾಲುಕ್ಯರ ವೈಭವ; 108 ದೇವಾಲಯಗಳ ರಹಸ್ಯ ಬಯಲಾಗುತ್ತಾ?

ಬೀದರ್ : ಬಸವಕಲ್ಯಾಣ ತಾಲೂಕಿನ ನಾರಾಯಣಪುರ ಗ್ರಾಮದಲ್ಲಿ ಪತ್ತೆಯಾಗಿರುವ ಪುರಾತನ ಅವಶೇಷಗಳು ಕರ್ನಾಟಕದ ಸಾಂಸ್ಕೃತಿಕ ಮತ್ತು ಐತಿಹಾಸಿಕ ಭೂಪಟದಲ್ಲಿ ಹೊಸ ಕುತೂಹಲ ಮೂಡಿಸಿವೆ. ಲಕ್ಕುಂಡಿ ಮತ್ತು ಬಳ್ಳಾರಿಯ ಸಂಶೋಧನೆಗಳ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದ್ದು, ಕಲ್ಯಾಣ ಚಾಲುಕ್ಯರ ಕಾಲದ ವೈಭವವನ್ನು ಮತ್ತೊಮ್ಮೆ ನೆನಪಿಸುತ್ತಿದೆ.

ಗ್ರಾಮದಲ್ಲಿ ಆಯೋಜಿಸಲಾಗಿದ್ದ ಹಿಂದೂ ಸಮಾವೇಶಕ್ಕಾಗಿ ಅಡುಗೆ ಸಿದ್ಧತೆ ನಡೆಸಲು ಭವಾನಿ ದೇವಸ್ಥಾನದ ಹಿಂಭಾಗದ ಜಾಗವನ್ನು ಸ್ವಚ್ಛಗೊಳಿಸುತ್ತಿದ್ದಾಗ ಈ ಅಪರೂಪದ ಅವಶೇಷಗಳು ಪತ್ತೆಯಾಗಿವೆ. ಮಣ್ಣಿನ ಅಡಿಯಲ್ಲಿ ಹುದುಗಿದ್ದ ಶಿವಲಿಂಗಗಳು, ಅಪರೂಪದ ಐದು ಹೆಡೆಯ ನಾಗಮೂರ್ತಿ, ಪ್ರಾಚೀನ ಶಿಲಾ ಶಾಸನಗಳು ಹಾಗೂ ನಯನಮನೋಹರವಾದ ಸರ್ಪ ರೂಪದ ಶಿಲ್ಪಗಳು ಭೂಗರ್ಭದಿಂದ ಹೊರಬಂದಿವೆ. ಈ ಆವಿಷ್ಕಾರವು ಕೇವಲ ಗ್ರಾಮಸ್ಥರಿಗೆ ಮಾತ್ರವಲ್ಲದೆ ಇತಿಹಾಸ ತಜ್ಞರಿಗೂ ಅಚ್ಚರಿ ತಂದಿದೆ.

ನಾರಾಯಣಪುರ ಗ್ರಾಮವು 12ನೇ ಶತಮಾನದ ಚಾಲುಕ್ಯರ ಕಾಲದಲ್ಲಿ ಅತ್ಯಂತ ಪ್ರಮುಖ ಕೇಂದ್ರವಾಗಿತ್ತು ಎಂಬ ನಂಬಿಕೆ ಇದೆ. ಇಲ್ಲಿ ಒಂದೇ ಕಡೆ 108 ದೇವಸ್ಥಾನಗಳಿದ್ದವು ಎಂಬ ಪ್ರತೀತಿ ಈ ಭಾಗದಲ್ಲಿ ಬಹಳ ಜನಪ್ರಿಯವಾಗಿದೆ. ಇದಕ್ಕೆ ಪೂರಕವೆಂಬಂತೆ, ಕಳೆದ 7-8 ವರ್ಷಗಳ ಹಿಂದೆಯೂ ಇಲ್ಲಿ ವಿಷ್ಣು ಮತ್ತು ಕಾಳಿಕಾ ಮಾತೆಯ ವಿಗ್ರಹಗಳು ಸಿಕ್ಕಿದ್ದವು. ಸದ್ಯ ಜನರು ಮನೆ ಕಟ್ಟಲು ಪಾಯ ಅಗೆದಾಗಲೂ ಕಲಾತ್ಮಕ ಶಿಲ್ಪಗಳು ಮತ್ತು ಪುರಾತನ ಅವಶೇಷಗಳು ದೊರೆಯುತ್ತಿರುವುದು ಐತಿಹ್ಯಕ್ಕೆ ಬಲ ತುಂಬುತ್ತಿದೆ.

ಭಾರತೀಯ ಪುರಾತತ್ವ ಇಲಾಖೆ ಮತ್ತು ರಾಜ್ಯ ಪುರಾತತ್ವ ಇಲಾಖೆ ಈ ಕೂಡಲೇ ನಾರಾಯಣಪುರದಲ್ಲಿ ವೈಜ್ಞಾನಿಕವಾಗಿ ಉತ್ಖನನ ನಡೆಸಬೇಕು ಎಂಬುದು ಜನರ ಒತ್ತಾಯವಾಗಿದೆ. ಈ ಮಣ್ಣಿನ ಅಡಿಯಲ್ಲಿ ಅಡಗಿರುವ ಬೃಹತ್ ದೇವಾಲಯಗಳ ಸಂಕೀರ್ಣದ ರಹಸ್ಯವನ್ನು ಹೊರಜಗತ್ತಿಗೆ ತಿಳಿಸಬೇಕೆಂದು ಅವರು ಸರ್ಕಾರವನ್ನು ವಿನಂತಿಸಿದ್ದಾರೆ.ಪ್ರಸ್ತುತ ಲಭ್ಯವಿರುವ ಕುರುಹುಗಳು 12ನೇ ಶತಮಾನಕ್ಕೆ ಸೇರಿವೆ ಎಂದು ಪ್ರಾಥಮಿಕವಾಗಿ ಅಂದಾಜಿಸಲಾಗಿದ್ದು, ಮುಂದಿನ ದಿನಗಳಲ್ಲಿ ಪುರಾತತ್ವ ಇಲಾಖೆಯ ಉನ್ನತ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡುವ ಸಾಧ್ಯತೆ ಇದೆ. ತಜ್ಞರ ಪರಿಶೀಲನೆಯ ನಂತರವಷ್ಟೇ ಈ ಶಾಸನಗಳ ಮೇಲಿರುವ ಬರಹಗಳು ಮತ್ತು ಶಿಲ್ಪಗಳ ಕಾಲಘಟ್ಟದ ಬಗ್ಗೆ ಅಧಿಕೃತ ಮಾಹಿತಿ ಹೊರಬರಬೇಕಿದೆ.

Comments (0)

Your email address will not be published. Required fields are marked *

Back to top button