ಎನ್‌ಸಿಪಿ ಮುಖ್ಯಸ್ಥ ಮತ್ತು ಹಿರಿಯ ರಾಜಕಾರಣಿ ಶರದ್ ಪವಾರ್ ಅವರು ತೀವ್ರ ಗಂಟಲು ನೋವು ಮತ್ತು ಉಸಿರಾಟದ ಸಮಸ್ಯೆಯಿಂದಾಗಿ ಪುಣೆಯ ರೂಬಿ ಹಾಲ್ ಕ್ಲಿನಿಕ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕಳೆದ ಕೆಲವು ದಿನಗಳಿಂದ ಕೆಮ್ಮು, ಶೀತ ಮತ್ತು ಜ್ವರದಿಂದ ಬಳಲುತ್ತಿದ್ದ ಅವರಿಗೆ ಮಹಾರಾಷ್ಟ್ರದ ಬಾರಾಮತಿಯ ನಿವಾಸದಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿತ್ತು. ಆದರೆ ಆರೋಗ್ಯದಲ್ಲಿ ಸುಧಾರಣೆ ಕಂಡುಬರದ ಹಿನ್ನೆಲೆಯಲ್ಲಿ, ವೈದ್ಯರ ಸಲಹೆಯ ಮೇರೆಗೆ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಪುಣೆಗೆ ಸ್ಥಳಾಂತರಿಸಲಾಗಿದೆ.
ಆಸ್ಪತ್ರೆಗೆ ದಾಖಲಿಸುವ ಸಮಯದಲ್ಲಿ ಶರದ್ ಪವಾರ್ ಅವರ ಪತ್ನಿ ಪ್ರತಿಭಾ ಪವಾರ್, ಪುತ್ರಿ ಸುಪ್ರಿಯಾ ಸುಳೆ ಮತ್ತು ಅಳಿಯ ಸದಾನಂದ ಸುಳೆ ಅವರ ಜೊತೆಗಿದ್ದರು. ಪ್ರಸ್ತುತ ವೈದ್ಯರ ವಿಶೇಷ ತಂಡವು ಅವರ ಆರೋಗ್ಯವನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಗಂಟಲಿನ ಸೋಂಕಿಗೆ ಸಂಬಂಧಿಸಿದಂತೆ ವಿವಿಧ ವೈದ್ಯಕೀಯ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ಪರೀಕ್ಷಾ ವರದಿಗಳು ಬಂದ ನಂತರವಷ್ಟೇ ಅವರ ಆರೋಗ್ಯ ಸ್ಥಿತಿಯ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.
ಮಹಾರಾಷ್ಟ್ರದ ರಾಜಕೀಯದಲ್ಲಿ ಸಕ್ರಿಯವಾಗಿರುವ ಶರದ್ ಪವಾರ್ ಅವರು ಇತ್ತೀಚಿನ ದಿನಗಳಲ್ಲಿ ಸತತವಾಗಿ ಜನರನ್ನು ಭೇಟಿ ಮಾಡುವುದು ಮತ್ತು ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದನ್ನು ಮುಂದುವರಿಸಿದ್ದರು. ಇದೀಗ ಅವರ ಅನಾರೋಗ್ಯದ ಸುದ್ದಿ ಕೇಳಿ ಎನ್‌ಸಿಪಿ ನಾಯಕರು ಮತ್ತು ಅಭಿಮಾನಿಗಳು ಆತಂಕ ವ್ಯಕ್ತಪಡಿಸಿದ್ದು, ಅವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತಿದ್ದಾರೆ. ವೈದ್ಯರು ಸದ್ಯಕ್ಕೆ ಅವರಿಗೆ ವಿಶ್ರಾಂತಿ ಪಡೆಯಲು ಸೂಚಿಸಿದ್ದಾರೆ.


