ಜಿಲ್ಲೆರಾಜ್ಯಸುದ್ದಿ

ಯಲಹಂಕದಲ್ಲಿ ಸಿಕ್ಕಿತು 19 ಲಕ್ಷ ಮೌಲ್ಯದ ಚಿನ್ನಾಭರಣವಿದ್ದ ಬ್ಯಾಗ್!

ಬೆಂಗಳೂರು: ಯಲಹಂಕ ರೈಲು ನಿಲ್ದಾಣದಲ್ಲಿ ಕಳೆದುಹೋಗಿದ್ದ ಬರೋಬ್ಬರಿ 19 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಮತ್ತು ನಗದು ಇದ್ದ ಬ್ಯಾಗ್‌ ಅನ್ನು ರೈಲ್ವೆ ರಕ್ಷಣಾ ಪಡೆ ಸಿಬ್ಬಂದಿ ಅತ್ಯಂತ ಪ್ರಾಮಾಣಿಕತೆಯಿಂದ ವಾರಸುದಾರರಿಗೆ ಹಿಂದಿರುಗಿಸಿದ್ದಾರೆ. ಫೆಬ್ರವರಿ 8ರಂದು ರಾತ್ರಿ ಪ್ರಯಾಣಿಕರೊಬ್ಬರು ನಿಲ್ದಾಣದಲ್ಲಿ ತಮ್ಮ ಕೆಂಪು ಬಣ್ಣದ ಟ್ರಾಲಿ ಬ್ಯಾಗ್‌ ಅನ್ನು ಮರೆತು ಹೋಗಿದ್ದರು. ಈ ಬಗ್ಗೆ ಕೂಡಲೇ ‘ರೈಲ್ ಮದದ್’ ಪೋರ್ಟಲ್‌ನಲ್ಲಿ ದೂರು ದಾಖಲಿಸಲಾಗಿತ್ತು. ದೂರು ಬಂದ ತಕ್ಷಣ ಕಾರ್ಯಪ್ರವೃತ್ತರಾದ ಆರ್​​ಪಿಎಫ್ ಸಿಬ್ಬಂದಿ ಪ್ಲಾಟ್‌ಫಾರ್ಮ್ ನಂಬರ್-1ರಲ್ಲಿ ಹುಡುಕಾಟ ನಡೆಸಿ ಬ್ಯಾಗ್ ಅನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.

ಪತ್ತೆಯಾದ ಬ್ಯಾಗ್ ಅನ್ನು ಪರಿಶೀಲಿಸಿದಾಗ ಅದರೊಳಗೆ 17 ಲಕ್ಷ ರೂಪಾಯಿ ಮೌಲ್ಯದ ಸುಮಾರು 100 ಗ್ರಾಂ ಚಿನ್ನಾಭರಣಗಳು ಮತ್ತು 2 ಲಕ್ಷ ರೂಪಾಯಿ ನಗದು ಪತ್ತೆಯಾಗಿದೆ. ಆರ್​​ಪಿಎಫ್ ಸಿಬ್ಬಂದಿ ಆಧಾರ್ ಕಾರ್ಡ್ ವಿವರಗಳನ್ನು ಪರಿಶೀಲಿಸಿ, ಮೂಲ ಮಾಲೀಕರನ್ನು ಸಂಪರ್ಕಿಸಿ ಕಾನೂನು ಪ್ರಕ್ರಿಯೆಗಳ ನಂತರ ಹಣ ಮತ್ತು ಒಡವೆಗಳನ್ನು ಸುರಕ್ಷಿತವಾಗಿ ಹಸ್ತಾಂತರಿಸಿದ್ದಾರೆ. ಕಳೆದುಹೋದ ಅಷ್ಟೂ ಸಂಪತ್ತು ಮರಳಿ ಸಿಕ್ಕಿದ್ದರಿಂದ ಪ್ರಯಾಣಿಕರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಆರ್​​ಪಿಎಫ್ ಪೊಲೀಸರ ಈ ತ್ವರಿತ ಗತಿಯ ಕಾರ್ಯಾಚರಣೆ ಮತ್ತು ಪ್ರಾಮಾಣಿಕತೆಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಜನವರಿ 31ರಂದು ಕೆ.ಆರ್. ಮಾರುಕಟ್ಟೆಯಿಂದ ಬಸವನಗುಡಿಗೆ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರು ಬಸ್‌ನಲ್ಲಿದ್ದ ವಿಪರೀತ ರಷ್‌ನಿಂದಾಗಿ ಆತುರದಲ್ಲಿ ತಮ್ಮ ಚಿನ್ನದ ಬ್ಯಾಗ್‌ ಅನ್ನು ಬಸ್‌ನಲ್ಲೇ ಮರೆತು ಇಳಿದಿದ್ದರು. ಸುಮಾರು 10 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣವಿದ್ದ ಈ ಬ್ಯಾಗ್‌ ಅನ್ನು ಬಿಎಂಟಿಸಿ ಸಿಬ್ಬಂದಿ ಪ್ರಾಮಾಣಿಕವಾಗಿ ಕಚೇರಿಗೆ ತಲುಪಿಸಿದ್ದರು. ನಂತರ ಪೊಲೀಸ್ ದೂರಿನ ಆಧಾರದ ಮೇಲೆ ಮಹಿಳೆಯನ್ನು ಸಂಪರ್ಕಿಸಿ ಪದ್ಮನಾಭನಗರ ಡಿಪೋದಲ್ಲಿ ಅವರ ಒಡವೆಗಳನ್ನು ಮರಳಿ ನೀಡಲಾಗಿದೆ. ಕಳೆದುಹೋದ ಚಿನ್ನ ಮತ್ತೆ ಸಿಕ್ಕ ಖುಷಿಯಲ್ಲಿ ಆ ಮಹಿಳೆ ಭಾವುಕರಾಗಿ ಕಣ್ಣೀರಿಟ್ಟ ದೃಶ್ಯ ಎಂತವರ ಮನ ಕರಗಿಸುವಂತಿತ್ತು.

Comments (0)

Your email address will not be published. Required fields are marked *

Back to top button