
ಬೆಂಗಳೂರು : ಸಿಲಿಕಾನ್ ಸಿಟಿಯ ಕೆಫೆ ಸಂಸ್ಕೃತಿಯು ಕೇವಲ ಆಹಾರಕ್ಕೆ ಸೀಮಿತವಾಗದೆ, ವ್ಯವಹಾರಿಕ ಮಾತುಕತೆಗಳ ತಾಣವಾಗಿ ಬದಲಾಗುತ್ತಿದೆ. ಇದರಿಂದಾಗಿ ಹೋಟೆಲ್ ಮಾಲೀಕರು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರವಾಗಿ ಇದೀಗ ಹೊಸದೊಂದು “ಟೇಬಲ್ ಚಾರ್ಜ್” ನಿಯಮ ಜಾರಿಗೆ ಬರುವ ಸಾಧ್ಯತೆ ದಟ್ಟವಾಗಿದೆ.
ನಗರದ ಹೋಟೆಲ್‌ವೊಂದರಲ್ಲಿ “ಒಂದು ಗಂಟೆಗಿಂತ ಹೆಚ್ಚು ಸಮಯ ಮೀಟಿಂಗ್ ಮಾಡಿದರೆ ಪ್ರತಿ ಗಂಟೆಗೆ 1,000 ರೂ. ಶುಲ್ಕ” ಎಂಬ ನೋಟಿಸ್ ವೈರಲ್ ಆದ ಬೆನ್ನಲ್ಲೇ ಈ ಚರ್ಚೆ ಕಾವೇರಿದೆ. ಬೆಂಗಳೂರಿನಲ್ಲಿ ಸುಮಾರು 35 ಸಾವಿರಕ್ಕೂ ಹೆಚ್ಚು ಹೋಟೆಲ್‌ಗಳಿದ್ದು, ಇಲ್ಲಿ ರಾಜಕೀಯ, ರಿಯಲ್ ಎಸ್ಟೇಟ್ ಮತ್ತು ಕಚೇರಿ ಸಂಬಂಧಿತ ಚರ್ಚೆಗಳು ಗಂಟೆಗಟ್ಟಲೆ ನಡೆಯುತ್ತವೆ. ಇದರಿಂದಾಗಿ ಊಟ-ತಿಂಡಿಗೆ ಬರುವ ಇತರ ಗ್ರಾಹಕರಿಗೆ ಆಸನದ ವ್ಯವಸ್ಥೆ ಸಿಗದೆ ಹೋಟೆಲ್ ಮಾಲೀಕರಿಗೆ ಆರ್ಥಿಕ ನಷ್ಟ ಉಂಟಾಗುತ್ತಿದೆ ಎಂಬ ದೂರುಗಳು ಕೇಳಿಬರುತ್ತಿವೆ.
ಈ ಸಮಸ್ಯೆಯನ್ನು ಹೋಗಲಾಡಿಸಲು ಬೃಹತ್ ಬೆಂಗಳೂರು ಹೋಟೆಲ್ ಸಂಘಕ್ಕೆ ಹಲವಾರು ಮಾಲೀಕರು ಮನವಿ ಸಲ್ಲಿಸಿದ್ದಾರೆ. ಪಂಚತಾರಾ ಹೋಟೆಲ್‌ಗಳ ಮಾದರಿಯಲ್ಲಿಯೇ ಸಣ್ಣ ಮತ್ತು ಮಧ್ಯಮ ವರ್ಗದ ಹೋಟೆಲ್‌ಗಳಲ್ಲೂ ಟೇಬಲ್ ಚಾರ್ಜ್ ಅಥವಾ ಸಮಯದ ಮಿತಿಯನ್ನು ನಿಗದಿಪಡಿಸುವ ಬಗ್ಗೆ ಗಂಭೀರವಾಗಿ ಆಲೋಚಿಸಲಾಗುತ್ತಿದೆ. ಪಾರ್ಕಿಂಗ್ ಶುಲ್ಕದಂತೆ, ಟೇಬಲ್ ಮೇಲೆ ಕುಳಿತುಕೊಳ್ಳುವ ಸಮಯಕ್ಕೂ ಶುಲ್ಕ ವಿಧಿಸುವ ಪ್ರಸ್ತಾವನೆಯ ಬಗ್ಗೆ ಸಂಘವು ಶೀಘ್ರದಲ್ಲೇ ಅಂತಿಮ ನಿರ್ಧಾರ ಪ್ರಕಟಿಸುವ ನಿರೀಕ್ಷೆಯಿದೆ.




