ರಾಜಕೀಯರಾಜ್ಯಸುದ್ದಿ

ಕಾಂಗ್ರೆಸ್‌ನಲ್ಲಿ ‘ಪವರ್’ ವಾರ್; ಯತೀಂದ್ರಗೆ ಶಿವಗಂಗಾ ಬಸವರಾಜ್ ವೋಟ್’ ಟಾಂಗ್

ಕರ್ನಾಟಕ ಕಾಂಗ್ರೆಸ್‌ನಲ್ಲಿ ಸಿಎಂ ಬದಲಾವಣೆ ಮತ್ತು ಅಧಿಕಾರ ಹಂಚಿಕೆಯ ಕುರಿತಾದ ಚರ್ಚೆ ಈಗ ಹೊಸ ತಿರುವು ಪಡೆದುಕೊಂಡಿದೆ. ದಾವಣಗೆರೆಯಲ್ಲಿ ಮಾತನಾಡಿದ ಚನ್ನಗಿರಿ ಶಾಸಕ ಬಸವರಾಜ್ ವಿ. ಶಿವಗಂಗಾ, ರಾಜ್ಯದಲ್ಲಿ ಎರಡೂವರೆ ವರ್ಷಗಳ ಅಧಿಕಾರ ಹಂಚಿಕೆಯ ಒಪ್ಪಂದವಾಗಿರುವುದು ನಮಗೆ ತಿಳಿದಿದೆ ಎಂದು ಹೇಳುವ ಮೂಲಕ ರಾಜಕೀಯ ವಲಯದಲ್ಲಿ ಸ್ಫೋಟಕ ಹೇಳಿಕೆ ನೀಡಿದ್ದಾರೆ.

ಡಿಸಿಎಂ ಡಿ.ಕೆ. ಶಿವಕುಮಾರ್ ಅವರಿಗೆ ಸುಮಾರು 139 ಶಾಸಕರ ಬೆಂಬಲವಿದ್ದು, ಅವರ ಕರೆಗೆ ಓಗೊಟ್ಟು ಪ್ರಾಣ ನೀಡಲೂ ಸಿದ್ಧವಿರುವ 40 ರಿಂದ 50 ಯುವ ಶಾಸಕರ ದಂಡೇ ನಮ್ಮಲ್ಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಸಿದ್ದರಾಮಯ್ಯ ಅವರು ಪದೇ ಪದೇ “ಸಿದ್ದರಾಮಯ್ಯ ಅವರೇ ಐದು ವರ್ಷ ಸಿಎಂ” ಎಂದು ನೀಡುತ್ತಿರುವ ಹೇಳಿಕೆ ಪಕ್ಷಕ್ಕೆ ಹಾನಿ ಮಾಡುತ್ತಿವೆ ಮತ್ತು ಹೈಕಮಾಂಡ್ ಇದನ್ನು ಗಂಭೀರವಾಗಿ ಗಮನಿಸಿದೆ . ಸಿಎಂ ಬದಲಾವಣೆ ವಿಚಾರದಲ್ಲಿ ನನ್ನ ವೋಟ್ ಇದೆ, ಆದರೆ ಯತೀಂದ್ರ ಅವರ ವೋಟ್ ಇಲ್ಲ, ಹಾಗಾಗಿ ಅವರ ಹೇಳಿಕೆಗೆ ಬೆಲೆ ನೀಡುವ ಅಗತ್ಯವಿಲ್ಲ ಎಂದು ಟಾಂಗ್ ನೀಡಿದ್ದಾರೆ.

ಪಕ್ಷದ ಹೈಕಮಾಂಡ್ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ ಅವರು ಅಧಿಕಾರ ಹಂಚಿಕೆಯ ಒಪ್ಪಂದದ ಬಗ್ಗೆ ಕೂಡಲೇ ಸ್ಪಷ್ಟನೆ ನೀಡಬೇಕು , ಒಂದು ವೇಳೆ ಅಂತಹ ಯಾವುದೇ ಒಪ್ಪಂದ ಆಗಿಲ್ಲ ಎಂದು ಸಿದ್ದರಾಮಯ್ಯನವರೇ ಸ್ಪಷ್ಟಪಡಿಸಿದರೆ ನಾವು ಸುಮ್ಮನಿರುತ್ತೇವೆ, ಅಲ್ಲಿಯವರೆಗೆ ಈ ಗೊಂದಲ ಮುಂದುವರಿಯಲಿದೆ ಎಂದಿದ್ದಾರೆ.

ಶಾಸಕ ಬಸವರಾಜ್ ಶಿವಗಂಗಾ ಅವರ ಈ ಹೇಳಿಕೆಯು ಕಾಂಗ್ರೆಸ್ ಒಳಗಿನ ಆಂತರಿಕ ಅಸಮಾಧಾನ ಮತ್ತು ನಾಯಕತ್ವದ ಸಂಘರ್ಷವನ್ನು ಬೀದಿಗೆ ತಂದಿದೆ.

Comments (0)

Your email address will not be published. Required fields are marked *

Back to top button