ಜಿಲ್ಲೆರಾಜ್ಯಸುದ್ದಿ

ಎಂಟನೇ ತರಗತಿ ವಿದ್ಯಾರ್ಥಿಯ ಮೇಲೆ ಶಿಕ್ಷಕರಿಂದ ‘ಗ್ಯಾಂಗ್ ಅಟ್ಯಾಕ್’..!?

ಗೌರಿಬಿದನೂರು : ಸಹಪಾಠಿಯ ಪುಸ್ತಕದ ಪುಟ ಹರಿದನೆಂಬ ಸಣ್ಣ ಕಾರಣಕ್ಕಾಗಿ ಎಂಟನೇ ತರಗತಿ ವಿದ್ಯಾರ್ಥಿಯ ಮೇಲೆ ನಾಲ್ವರು ಶಿಕ್ಷಕರು ಅಮಾನವೀಯವಾಗಿ ಹಲ್ಲೆ ನಡೆಸಿರುವುದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ. ಮಧುಗಿರಿ ತಾಲೂಕಿನ ಕೊಡಿಗೇನಹಳ್ಳಿ ಮೂಲದ ಸುಶಾಂತ್ ಎಂಬ ವಿದ್ಯಾರ್ಥಿ ಹಲ್ಲೆಗೊಳಗಾಗಿದ್ದಾನೆ,

ಶಿಕ್ಷಕರಾದ ದೇವರಾಜು, ಹೇಮಾವತಿ, ವನಜಾಕ್ಷಿ ಹಾಗೂ ಇನ್ನೊಬ್ಬ ಸಿಬ್ಬಂದಿ ವಿದ್ಯಾರ್ಥಿಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಲ್ಲದೆ, ಆತನ ಮೇಲೆ ಕೈ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಶಿಕ್ಷಕರ ಸರಣಿ ಹೊಡೆತಗಳಿಗೆ ತಾಳಲಾರದೆ ಸುಶಾಂತ್ ಶಾಲಾ ಆವರಣದಲ್ಲೇ ಪ್ರಜ್ಞೆ ತಪ್ಪಿ ಬಿದ್ದಿದ್ದಾನೆ. ಪರಿಸ್ಥಿತಿ ಕೈಮೀರುತ್ತಿರುವುದನ್ನು ಗಮನಿಸಿದ ಶಾಲಾ ಸಿಬ್ಬಂದಿ ಕೂಡಲೇ ಆತನನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವಿದ್ಯಾರ್ಥಿಯ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಆಸ್ಪತ್ರೆಗೆ ಧಾವಿಸಿದ ಪೋಷಕರು ಮತ್ತು ಸಂಬಂಧಿಕರು ಶಾಲಾ ಆಡಳಿತ ಮಂಡಳಿಯ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಮಕ್ಕಳನ್ನು ತಿದ್ದಿ ಬುದ್ಧಿ ಹೇಳಬೇಕಾದ ಶಿಕ್ಷಕರೇ ರಕ್ಕಸರಂತೆ ವರ್ತಿಸುವುದು ಎಷ್ಟರ ಮಟ್ಟಿಗೆ ಸರಿ?” ಎಂದು ಪ್ರಶ್ನಿಸಿದ್ದಾರೆ. ಹಲ್ಲೆ ನಡೆಸಿದ ಶಿಕ್ಷಕರನ್ನು ಕೂಡಲೇ ಅಮಾನತುಗೊಳಿಸಿ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಒತ್ತಾಯಿಸಲಾಗಿದೆ.

ಶಾಲಾ ಮಕ್ಕಳ ಸುರಕ್ಷತೆಯ ಬಗ್ಗೆ ಪೋಷಕರಲ್ಲಿ ಭೀತಿ ಮೂಡಿಸಿದೆ. ಪೋಷಕರು ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲು ಮುಂದಾಗಿದ್ದು, ಶಿಕ್ಷಣ ಇಲಾಖೆಯ ಉನ್ನತ ಅಧಿಕಾರಿಗಳು ಶಾಲೆಗೆ ಭೇಟಿ ನೀಡಿ ತನಿಖೆ ನಡೆಸುವಂತೆ ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.

Comments (0)

Your email address will not be published. Required fields are marked *

Back to top button