Top Newsಜಿಲ್ಲೆದೇಶ/ವಿದೇಶರಾಜಕೀಯರಾಜ್ಯಸುದ್ದಿ

ಓಲಾ-ಊಬರ್ ಆಲ್ ಇಂಡಿಯಾ ಬ್ರೇಕ್‌ಡೌನ್ ಮುಷ್ಕರ; ದರ ಸಮರಕ್ಕೆ ಬಿತ್ತು ಬ್ರೇಕ್

ಸರಕಾರವು ವ್ಯವಸ್ಥಿತ ದರ ನಿಗದಿ ಮಾಡದಿರುವುದು ಮತ್ತು ಖಾಸಗಿ ಕಂಪನಿಗಳ ಏಕಪಕ್ಷೀಯ ಧೋರಣೆಯನ್ನು ಪ್ರತಿಭಟಿಸಿ ಇಂದು ದೇಶಾದ್ಯಂತ ಓಲಾ, ಊಬರ್ ಮತ್ತು ರ‍್ಯಾಪಿಡೋ ಚಾಲಕರು “ಆಲ್ ಇಂಡಿಯಾ ಬ್ರೇಕ್‌ಡೌನ್” ಮುಷ್ಕರ ಹಮ್ಮಿಕೊಂಡಿದ್ದಾರೆ. ಇದರಿಂದಾಗಿ ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಟ್ಯಾಕ್ಸಿ ಮತ್ತು ಆಟೋ ಸೇವೆಗಳಲ್ಲಿ ಭಾರೀ ವ್ಯತ್ಯಯ ಉಂಟಾಗುವ ಸಾಧ್ಯತೆಯಿದೆ.

ತೆಲಂಗಾಣ ಗಿಗ್ ಮತ್ತು ಪ್ಲಾಟ್‌ಫಾರ್ಮ್ ಕಾರ್ಮಿಕರ ಒಕ್ಕೂಟ ಈ ಪ್ರತಿಭಟನೆಗೆ ಕರೆ ನೀಡಿದ್ದು, ದೇಶಾದ್ಯಂತ ಚಾಲಕರು ಇಂದು ಸುಮಾರು ಆರು ಗಂಟೆಗಳ ಕಾಲ ತಮ್ಮ ಆ್ಯಪ್‌ಗಳನ್ನು ಆಫ್ ಮಾಡುವ ಮೂಲಕ ಸೇವೆ ಸ್ಥಗಿತಗೊಳಿಸಲಿದ್ದಾರೆ. ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರಮುಖ ಪ್ರತಿಭಟನೆ ನಡೆಯಲಿದ್ದು, ಇದಕ್ಕೆ ಕರ್ನಾಟಕದ ಚಾಲಕ ಸಂಘಟನೆಗಳು ಕೂಡ ಬೆಂಬಲ ಸೂಚಿಸಿವೆ.

ಖಾಸಗಿ ಆ್ಯಪ್ ಸಂಸ್ಥೆಗಳು ತಮಗೆ ಇಚ್ಛೆ ಬಂದಂತೆ ದರ ನಿಗದಿಪಡಿಸುತ್ತಿದ್ದು, ಇಂಧನ ಬೆಲೆ ಏರಿಕೆಯ ನಡುವೆಯೂ ಚಾಲಕರ ಆದಾಯ ಕುಸಿಯುತ್ತಿದೆ ಎಂಬುದು ಪ್ರಮುಖ ಆರೋಪವಾಗಿದೆ. ಇದರ ಜೊತೆಗೆ ವೈಟ್ ಬೋರ್ಡ್ ಹೊಂದಿರುವ ಖಾಸಗಿ ವಾಹನಗಳನ್ನು ವಾಣಿಜ್ಯ ಉದ್ದೇಶಕ್ಕೆ ಬಳಸುವುದು, ಪ್ಯಾನಿಕ್ ಬಟನ್ ಅಳವಡಿಕೆಯ ಹೆಸರಿನಲ್ಲಿ ಚಾಲಕರ ಮೇಲೆ ಹೇರುತ್ತಿರುವ ಅನಗತ್ಯ ದಂಡ ಮತ್ತು ವಿಮಾ ಸೌಲಭ್ಯಗಳ ಕೊರತೆಯ ಬಗ್ಗೆಯೂ ಚಾಲಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.ಇತ್ತ ಖಾಸಗಿ ಕಂಪನಿಗಳ ವಿರುದ್ಧ ಚಾಲಕರು ಮುಷ್ಕರ ನಡೆಸುತ್ತಿದ್ದರೆ, ಅತ್ತ ಕೇಂದ್ರ ಸರ್ಕಾರವು ಫೆಬ್ರವರಿ 5ರಂದೇ ಓಲಾ-ಊಬರ್‌ಗೆ ಪರ್ಯಾಯವಾಗಿ “ಭಾರತ್ ಟ್ಯಾಕ್ಸಿ” ಎಂಬ ಹೊಸ ಸಹಕಾರಿ ಮಾದರಿಯ ಆ್ಯಪ್ ಆಧಾರಿತ ಸೇವೆಗೆ ದೆಹಲಿಯಲ್ಲಿ ಚಾಲನೆ ನೀಡಿದೆ.

ಈ ಮುಷ್ಕರದ ಬಿಸಿಯಿಂದಾಗಿ ರೈಲ್ವೆ ನಿಲ್ದಾಣ ಮತ್ತು ವಿಮಾನ ನಿಲ್ದಾಣಗಳಿಗೆ ತೆರಳುವ ಪ್ರಯಾಣಿಕರಿಗೆ ತೊಂದರೆಯಾಗುವ ಸಾಧ್ಯತೆಯಿದ್ದು, ಪರ್ಯಾಯ ಸಾರಿಗೆ ವ್ಯವಸ್ಥೆಗಳನ್ನು ಬಳಸಲು ಸಲಹೆ ನೀಡಲಾಗಿದೆ.ಮುಷ್ಕರದ ಸಮಯದಲ್ಲಿ ಚಾಲಕರು ತಮ್ಮ ಮೊಬೈಲ್ ಆ್ಯಪ್‌ಗಳನ್ನು ಲಾಗ್-ಔಟ್ ಮಾಡಲಿದ್ದು, ಈ ದರ ಸಮರವು ಮುಂದಿನ ದಿನಗಳಲ್ಲಿ ಸಾರಿಗೆ ವಲಯದಲ್ಲಿ ಯಾವ ಬದಲಾವಣೆ ತರಲಿದೆ ಎಂಬುದು ಕುತೂಹಲ ಮೂಡಿಸಿದೆ.

Comments (0)

Your email address will not be published. Required fields are marked *

Back to top button