ಚಿನ್ನ ಮತ್ತು ಬೆಳ್ಳಿಯ ಮೇಲೆ ಹೂಡಿಕೆ ಮಾಡಲು ಯೋಚಿಸುತ್ತಿರುವವರಿಗೆ ಜ್ಯೋತಿಷ್ಯ ಶಾಸ್ತ್ರ ಮತ್ತು ತಜ್ಞರಿಂದ ಒಂದು ಅಚ್ಚರಿಯ ಎಚ್ಚರಿಕೆ ಸಂದೇಶ ರವಾನೆಯಾಗಿದೆ. ಮಾರ್ಚ್ 03, 2026ರಂದು ಸಂಭವಿಸಲಿರುವ ಚಂದ್ರಗ್ರಹಣದವರೆಗೂ ಹೂಡಿಕೆದಾರರು ತುಸು ಸಮಾಧಾನದಿಂದ ಇರಬೇಕೆಂದು ಪಂಡಿತರು ಸಲಹೆ ನೀಡಿದ್ದಾರೆ.

ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಅವರ ಕಠಿಣ ನಿರ್ಧಾರಗಳು ಮತ್ತು ಜಾಗತಿಕ ರಾಜಕೀಯ ಅಸ್ಥಿರತೆಯಿಂದಾಗಿ ಗಗನಕ್ಕೇರಿದ್ದ ಚಿನ್ನದ ದರಗಳು, ಈಗ ಲಾಭ ಬುಕಿಂಗ್ ಪ್ರಕ್ರಿಯೆಯಿಂದಾಗಿ ದಿಢೀರ್ ಇಳಿಕೆ ಕಂಡಿವೆ. ಈ ಇಳಿಕೆಯನ್ನು ನೋಡಿ ಆತುರದಿಂದ ಹಣ ಹೂಡುವ ಮುನ್ನ ಗ್ರಹಗತಿಗಳ ಬದಲಾವಣೆಯನ್ನು ಗಮನಿಸುವುದು ಅತ್ಯಗತ್ಯವಾಗಿದೆ.

ಈ ವರ್ಷದ ಚಂದ್ರಗ್ರಹಣವು ಕೇವಲ ಖಗೋಳ ವಿದ್ಯಮಾನವಲ್ಲದೆ, ಆರ್ಥಿಕ ಸ್ಥಿರತೆಯ ಮೇಲೂ ಪ್ರಭಾವ ಬೀರಲಿದೆ ಎಂದು ಜ್ಯೋತಿಷಿಗಳು ಬಣ್ಣಿಸುತ್ತಿದ್ದಾರೆ. ಮಾರ್ಚ್ 03ರ ಚಂದ್ರಗ್ರಹಣವು ಪಂಚಗ್ರಹಗಳ ಸಂಯೋಗದೊಂದಿಗೆ ನಡೆಯುತ್ತಿರುವುದು ವಿಶೇಷ. ಬುಧ, ಶುಕ್ರ, ರಾಹು, ಸೂರ್ಯ ಮತ್ತು ಚಂದ್ರ ಎಂಬ ಈ ಐದು ಗ್ರಹಗಳು ಅತಿ ವೇಗವಾಗಿ ಚಲಿಸುವ ಸ್ವಭಾವ ಹೊಂದಿದ್ದು, ಇವುಗಳ ಮೈತ್ರಿಯು ಜಾಗತಿಕ ಮಾರುಕಟ್ಟೆಯಲ್ಲಿ ಅಸ್ಥಿರತೆಯನ್ನು ಸೃಷ್ಟಿಸಲಿವೆ. ಕಳೆದ ವರ್ಷವೂ ಇಂತಹುದೇ ಪಂಚಗ್ರಹಗಳ ಸಂಯೋಗವು ಚಿನ್ನ ಮತ್ತು ಬೆಳ್ಳಿಯ ದರವನ್ನು ದಾಖಲೆ ಮಟ್ಟಕ್ಕೆ ಏರಿಸಿದ್ದನ್ನು ನೆನಪಿಸುತ್ತದೆ .

ಮತ್ತೊಂದು ಪ್ರಮುಖ ಕಾರಣವೆಂದರೆ, ಯುಗಾದಿ 2026ರ ನಂತರ ಮಾರುಕಟ್ಟೆಯಲ್ಲಿ ಒಂದು ರೀತಿಯ ಹೊಸ ಸಂಚಲನ ಮೂಡಲಿದ್ದು, ಅಲ್ಲಿಯವರೆಗೂ ಹೂಡಿಕೆಯ ಲಾಭವು ಮರೀಚಿಕೆಯಾಗುವ ಸಾಧ್ಯತೆ ಇದೆ. ಮಹಾಶಿವರಾತ್ರಿಯ ನಂತರ ಬರುವ ಸೂರ್ಯಗ್ರಹಣ ಮತ್ತು ಅದಕ್ಕೂ ಮುನ್ನ ನಡೆಯುವ ಚಂದ್ರಗ್ರಹಣದ ಅವಧಿಯು ‘ಬ್ರೇಕ್ ಈವನ್ ಪಾಯಿಂಟ್’ ಆಗಿರುವುದರಿಂದ, ಹೂಡಿಕೆ ಮಾಡುವುದಕ್ಕಿಂತ ಗ್ರಹಣ ಶಾಂತಿ ಮುಗಿದ ನಂತರ ಶುಭ ಯೋಗದಲ್ಲಿ ಹೆಜ್ಜೆ ಇಡುವುದು ಉತ್ತಮ ಲಾಭ ತಂದುಕೊಡಲಿದೆ.
ಗ್ರಹಣದ ನಂತರ ಚಿನ್ನ ಮತ್ತು ಬೆಳ್ಳಿ ದರಗಳು ಮತ್ತೆ ಏರಿಕೆಯ ಹಾದಿ ಹಿಡಿಯುವ ಮುನ್ಸೂಚನೆ ಇರುವುದರಿಂದ, ಈಗಿನ ಬೆಲೆ ಇಳಿಕೆಗೆ ಮಾರುಹೋಗದೆ ತಾಳ್ಮೆ ವಹಿಸುವುದು ಜಾಣತನದ ಲಕ್ಷಣವಾಗಿದೆ. ನಿಮ್ಮ ಕಷ್ಟಪಟ್ಟು ದುಡಿದ ಹಣವನ್ನು ಬಂಗಾರದ ಮೇಲೆ ಹೂಡುವ ಮೊದಲು ಈ ಪಂಚಗ್ರಹಗಳ ಆಟ ಮುಗಿಯುವವರೆಗೂ ಕಾಯುವುದು ನಿಮ್ಮ ಆರ್ಥಿಕ ಭವಿಷ್ಯಕ್ಕೆ ಭದ್ರತೆ ನೀಡಬಹುದು.


