ಅರಸೀಕೆರೆ: ಶಾಸಕ ಕೆ.ಎಂ. ಶಿವಲಿಂಗೇಗೌಡರು ವಿಧಾನಸಭೆಯಲ್ಲಿ ಬಿಜೆಪಿ ಶಾಸಕ ಶರಣು ಸಲಗರ ಅವರ ಪತ್ನಿಯ ಕುರಿತು ಆಡಿದ ಮಾತುಗಳು ಈಗ ರಾಜಕೀಯ ವಲಯದಲ್ಲಿ ದೊಡ್ಡ ವಿವಾದಕ್ಕೆ ಕಾರಣವಾಗಿವೆ. ಈ ಕುರಿತು ಸದನದ ಒಳಗೆ ಮತ್ತು ಹೊರಗೆ ತೀವ್ರ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ, ಶಿವಲಿಂಗೇಗೌಡರು ತಮ್ಮ ಹೇಳಿಕೆಗೆ ವಿಷಾದ ವ್ಯಕ್ತಪಡಿಸಿದ್ದಾರೆ.
ಕೊಬ್ಬರಿ ಕಳ್ಳ ಎಂದಿದ್ದಕ್ಕೆ ರೊಚ್ಚಿಗೆದ್ದ ಶಿವಲಿಂಗೇಗೌಡ: ಶಾಸಕ ಸ್ಥಾನಕ್ಕೆ ಕುತ್ತು ತರುತ್ತಾ ಜೆಡಿಎಸ್ ಆಗ್ರಹ?
ಅಧಿವೇಶನದಲ್ಲಿ ನಡೆದ ಈ ಘಟನೆಯನ್ನು ‘ಅಕ್ಷಮ್ಯ ಅಪರಾಧ’ ಎಂದು ಕರೆದಿರುವ ಜೆಡಿಎಸ್, ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸುವಂತೆ ಸ್ಪೀಕರ್ ಯು.ಟಿ. ಖಾದರ್ ಅವರಿಗೆ ಆಗ್ರಹಿಸಿದೆ.ತಮ್ಮ ವರ್ತನೆಯನ್ನು ಸಮರ್ಥಿಸಿಕೊಂಡಿರುವ ಶಿವಲಿಂಗೇಗೌಡರು, “ಬಿಜೆಪಿ ಸದಸ್ಯರು ನನ್ನನ್ನು ‘ಕೊಬ್ಬರಿ ಕಳ್ಳ’ ಎಂದು ಪ್ರಚೋದಿಸಿದ್ದರಿಂದ ನಾನು ರೊಚ್ಚಿಗೆದ್ದು ಪ್ರತಿಕ್ರಿಯಿಸಬೇಕಾಯಿತು.

ಶಾಸಕ ಶರಣು ಸಲಗರ ಅವರ ಪತ್ನಿ ತಹಶೀಲ್ದಾರ್ ಆಗಿದ್ದು, ಅವರ ಬೆಂಬಲದಿಂದಲೇ ಸಲಗರ ಶಾಸಕರಾಗಿದ್ದಾರೆ ಎಂದು ನಮ್ಮ ಕಡೆಯವರು ಹೇಳಿದ್ದನ್ನು ನಾನು ಪ್ರಸ್ತಾಪಿಸಿದ್ದೆ. ಹೆಣ್ಣುಮಕ್ಕಳ ಬಗ್ಗೆ ನಾನು ವೈಯಕ್ತಿಕವಾಗಿ ಹಗುರವಾಗಿ ಮಾತನಾಡಿಲ್ಲ, ಆದರೂ ನನ್ನ ಮಾತುಗಳಿಂದ ನೋವಾಗಿದ್ದರೆ ವಿಷಾದ ವ್ಯಕ್ತಪಡಿಸುತ್ತೇನೆ” ಎಂದು ಸ್ಪಷ್ಟನೆ ನೀಡಿದ್ದಾರೆ. ಅಲ್ಲದೆ, ತಮ್ಮ ವೈಯಕ್ತಿಕ ಬದುಕಿನ ಬಗ್ಗೆ ಮಾತನಾಡುವ ಬಿಜೆಪಿಯವರಿಗೆ ತಕ್ಕ ಉತ್ತರ ನೀಡಿದ್ದೇನೆ ಎಂದು ಅವರು ಸಮರ್ಥಿಸಿಕೊಂಡಿದ್ದಾರೆ.
ಶಿವಲಿಂಗೇಗೌಡರ ವಿರುದ್ಧ ಕಿಡಿಕಾರಿರುವ ಜೆಡಿಎಸ್, ಸದನದ ಘನತೆಗೆ ಧಕ್ಕೆ ತಂದಿರುವ ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಬೇಕು ಎಂದು ಒತ್ತಾಯಿಸಿದೆ. ಸಭಾಧ್ಯಕ್ಷರ ಎದುರೇ ಗೂಂಡಾ ಪ್ರವೃತ್ತಿ ಪ್ರದರ್ಶಿಸಿ, ಪ್ರತಿಪಕ್ಷದ ಶಾಸಕರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿರುವುದು ಸಂಸದೀಯ ಮೌಲ್ಯಗಳಿಗೆ ವಿರುದ್ಧವಾಗಿದೆ. ಇಂತಹ ವರ್ತನೆಯನ್ನು ತೋರಿದವರನ್ನು ಮುಂದಿನ ಎಲ್ಲಾ ಅಧಿವೇಶನಗಳಿಂದ ಅಮಾನತುಗೊಳಿಸಬೇಕು ಎಂದು ಜೆಡಿಎಸ್ ಟ್ವೀಟ್ ಮೂಲಕ ಆಗ್ರಹಿಸಿದೆ. ಈ ಸಂಘರ್ಷವು ಆಡಳಿತ ಮತ್ತು ಪ್ರತಿಪಕ್ಷಗಳ ನಡುವಿನ ವಾಕ್ಸಮರವನ್ನು ಮತ್ತಷ್ಟು ತೀವ್ರಗೊಳಿಸಿದೆ.


