ದಳಪತಿ ವಿಜಯ್ ನಟನೆಯ ಬಹುನಿರೀಕ್ಷಿತ ಚಿತ್ರ ‘ಜನ ನಾಯಗನ್’ ಬಿಡುಗಡೆಯ ವಿಳಂಬ ಇದೀಗ ಚಿತ್ರರಂಗದಲ್ಲಿ ಭಾರಿ ಸಂಚಲನ ಮೂಡಿಸಿದೆ. ಸೆನ್ಸಾರ್ ಮಂಡಳಿ ಪ್ರಮಾಣಪತ್ರ ನೀಡಲು ವಿಳಂಬ ಮಾಡಿದ ಹಿನ್ನೆಲೆಯಲ್ಲಿ ಈ ವಿವಾದ ನ್ಯಾಯಾಲಯದ ಮೆಟ್ಟಿಲೇರಿದ್ದು, ಸದ್ಯಕ್ಕೆ ಸಿನಿಮಾ ತೆರೆಗೆ ಬರುವ ಲಕ್ಷಣಗಳು ಕಾಣುತ್ತಿಲ್ಲ.
ತಮಿಳುನಾಡು ವಿಧಾನಸಭೆ ಚುನಾವಣೆ ಮುಗಿಯುವವರೆಗೂ ಸಿನಿಮಾ ಬಿಡುಗಡೆಯಾಗುವುದು ಅನುಮಾನ ಎಂಬ ಮಾತುಗಳು ಕೇಳಿಬರುತ್ತಿವೆ. ಈ ವಿಳಂಬದಿಂದಾಗಿ ನಿರ್ಮಾಪಕ ಕೆವಿಎನ್ ಮಾತ್ರವಲ್ಲದೆ, ಚಿತ್ರಮಂದಿರಗಳ ಮಾಲೀಕರಿಗೂ ಸುಮಾರು 100 ಕೋಟಿ ರೂಪಾಯಿಗಳಿಗೂ ಅಧಿಕ ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ.
ಜನವರಿ 10ಕ್ಕೆ ಅದ್ಧೂರಿಯಾಗಿ ಬಿಡುಗಡೆಯಾಗಬೇಕಿದ್ದ ಈ ಸಿನಿಮಾ ವಿಜಯ್ ಅವರ ಕೊನೆಯ ಚಿತ್ರ ಎಂಬ ಕಾರಣಕ್ಕೆ ಪ್ರೇಕ್ಷಕರಲ್ಲಿ ಭಾರಿ ಕುತೂಹಲ ಮೂಡಿಸಿತ್ತು. ಬೆಂಗಳೂರು ಸೇರಿದಂತೆ ಹಲವೆಡೆ ಸಾವಿರಾರು ಅಭಿಮಾನಿಗಳು ಮುಂಗಡವಾಗಿ ಟಿಕೆಟ್ ಬುಕ್ ಮಾಡಿದ್ದರು. ಆದರೆ ಹಠಾತ್ತನೇ ಸಿನಿಮಾ ಮುಂದೂಡಲ್ಪಟ್ಟಿದ್ದರಿಂದ ಚಿತ್ರಮಂದಿರಗಳಿಗೆ ದೊಡ್ಡ ಹೊಡೆತ ಬಿದ್ದಿದೆ. ತಮಿಳುನಾಡಿನ ಸಿನಿಮಾ ವ್ಯವಹಾರ ವಿಶ್ಲೇಷಕ ರಮೇಶ್ ಬಾಲಾ ಅವರ ಪ್ರಕಾರ, ವಿಜಯ್ ಸಿನಿಮಾಗಳು ಚಿತ್ರಮಂದಿರಗಳಿಗೆ ಭಾರಿ ಲಾಭ ತಂದುಕೊಡುತ್ತಿದ್ದವು. ಈ ಬಾರಿ ಸಿನಿಮಾ ಬಿಡುಗಡೆಯಾಗದ ಕಾರಣ ಚಿತ್ರಮಂದಿರಗಳು ಅಕ್ಷರಶಃ ನಷ್ಟದ ಸುಳಿಗೆ ಸಿಲುಕಿವೆ.
ಸದ್ಯ ಈ ಪ್ರಕರಣ ಹೈಕೋರ್ಟ್‌ನ ಏಕಸದಸ್ಯ ಪೀಠದಲ್ಲಿದೆ. ಆದರೆ ನ್ಯಾಯಾಲಯದಲ್ಲಿ ವಿಚಾರಣೆ ಮತ್ತಷ್ಟು ವಿಳಂಬವಾಗುವ ಭೀತಿ ಇರುವುದರಿಂದ, ಚಿತ್ರತಂಡವು ಹೈಕೋರ್ಟ್‌ನಿಂದ ಅರ್ಜಿಯನ್ನು ಹಿಂಪಡೆದು ಸಿನಿಮಾವನ್ನು ಸಿಬಿಎಫ್‌ಸಿಯ ರಿವ್ಯೂ ಕಮಿಟಿಗೆ ಕಳಿಸಲು ನಿರ್ಧರಿಸಿದೆ ಎನ್ನಲಾಗುತ್ತಿದೆ. ರಿವ್ಯೂ ಕಮಿಟಿಗೆ ಕಳಿಸಿದರೆ ಅವರು ಸೂಚಿಸುವ ಕಟ್ ಮತ್ತು ಮ್ಯೂಟ್‌ಗಳನ್ನು ಒಪ್ಪಿಕೊಳ್ಳಬೇಕಾಗುತ್ತದೆ. ಆದರೆ 15 ದಿನಗಳ ಒಳಗಾಗಿ ಪ್ರಮಾಣಪತ್ರ ಸಿಗುವ ಸಾಧ್ಯತೆ ಇರುವುದರಿಂದ, ಚಿತ್ರವನ್ನು ಶೀಘ್ರವಾಗಿ ಬಿಡುಗಡೆ ಮಾಡಲು ಚಿತ್ರತಂಡ ಈ ಪರ್ಯಾಯ ಹಾದಿಯನ್ನು ತುಳಿಯಲು ಮುಂದಾಗಿದೆ.


