ಸಂಸತ್ತಿನ ಆವರಣದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ರಾಹುಲ್ ಗಾಂಧಿ ಅವರು ರವನೀತ್ ಸಿಂಗ್ ಬಿಟ್ಟು ಅವರನ್ನು ಕಂಡು “ದೇಶದ್ರೋಹಿ” ಎಂದು ಲೇವಡಿ ಮಾಡಿದ್ದಕ್ಕೆ ಸಚಿವರು ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ. “ನಾನು ಹ್ಯಾಂಡ್ಶೇಕ್ ನಿರಾಕರಿಸಿದ್ದಕ್ಕೆ ಕಾರಣವಿದೆ.. ಸಿಖ್ಖರ ಹತ್ಯೆ ಮಾಡಿದ ಗಾಂಧಿ ಕುಟುಂಬದ ಕುಡಿಯೊಂದಿಗೆ ಒಬ್ಬ ಸರ್ದಾರ್ ಎಂದಿಗೂ ಕೈಕುಲುಕುವುದಿಲ್ಲ” ಎಂದು ಗುಡುಗಿದ್ದಾರೆ. ರಾಹುಲ್ ಗಾಂಧಿ ತಮ್ಮ ತಂದೆಯ ತ್ಯಾಗದಿಂದಾಗಿ ತಾವೊಬ್ಬರೇ ದೊಡ್ಡ ದೇಶಭಕ್ತ ಎಂದು ಭಾವಿಸಿದ್ದಾರೆ, ಆದರೆ ಗಾಂಧಿ ಕುಟುಂಬ ಮತ್ತು ಕಾಂಗ್ರೆಸ್ ಪಕ್ಷವು ಪಂಜಾಬ್ಗೆ ಬೆಂಕಿ ಹಚ್ಚಿದ್ದನ್ನು ಮರೆಯಬಾರದು ಎಂದು ಅವರು ಕಿಡಿಕಾರಿದ್ದಾರೆ.
1984ರ ಆಪರೇಷನ್ ಬ್ಲೂ ಸ್ಟಾರ್ ಮತ್ತು ಸಿಖ್ ವಿರೋಧಿ ಗಲಭೆಗಳನ್ನು ಸ್ಮರಿಸಿದ ಬಿಟ್ಟು, ಗೋಲ್ಡನ್ ಟೆಂಪಲ್ ಮೇಲೆ ಗುಂಡು ಹಾರಿಸಿದ್ದು ಮತ್ತು ಸಾವಿರಾರು ಸಿಖ್ಖರನ್ನು ಕೊಂದ ನೋವು ಇಂದಿಗೂ ಹಸಿರಾಗಿದೆ ಎಂದಿದ್ದಾರೆ. “ನಾನು ಕೂಡ ಹುತಾತ್ಮನ ಮೊಮ್ಮಗ, ನನಗೂ ಕುಟುಂಬದವರನ್ನು ಕಳೆದುಕೊಂಡ ನೋವಿದೆ. ನಾನು ಕಾಂಗ್ರೆಸ್ನಲ್ಲಿರುವವರೆಗೂ ಅವರಿಗೆ ದೇಶಭಕ್ತನಾಗಿದ್ದೆ, ಈಗ ಬಿಜೆಪಿಗೆ ಸೇರಿದ ತಕ್ಷಣ ದೇಶದ್ರೋಹಿಯಾದೆನೇ?” ಎಂದು ಪ್ರಶ್ನಿಸಿದ್ದಾರೆ.
ಗಾಂಧಿ ಕುಟುಂಬದ ಇತಿಹಾಸವು ಸಿಖ್ಖರ ರಕ್ತದಿಂದ ಕೂಡಿದೆ ಅಂತಹ ಕುಟುಂಬದ ಸದಸ್ಯರೊಂದಿಗೆ ಸ್ನೇಹ ಬೆಳೆಸುವ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದಾರೆ. ಈ ಬೆಳವಣಿಗೆಯು ಪಂಜಾಬ್ ರಾಜಕೀಯ ಮತ್ತು 1984ರ ಕರಾಳ ನೆನಪುಗಳನ್ನು ಮತ್ತೆ ಮುನ್ನೆಲೆಗೆ ತಂದಿದೆ.


