ಧನುಷ್ ಜೊತೆ ಮದುವೆ ವದಂತಿ: ಮೌನ ಮುರಿದ ಮೃಣಾಲ್ ಠಾಕೂರ್

ಚೆನ್ನೈ/ಮುಂಬೈ: ತಮಿಳು ಸೂಪರ್ ಸ್ಟಾರ್ ಧನುಷ್ ಮತ್ತು ನಟಿ ಮೃಣಾಲ್ ಠಾಕೂರ್ ನಡುವಿನ ಗಾಸಿಪ್‌ಗಳಿಗೆ ಈಗ ಬ್ರೇಕ್ ಬಿದ್ದಿದೆ. ಕಳೆದ ಕೆಲವು ದಿನಗಳಿಂದ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದ ಮದುವೆ ಸುದ್ದಿಗಳ ಬಗ್ಗೆ ಮೃಣಾಲ್ ಠಾಕೂರ್ ಮೊದಲ ಬಾರಿಗೆ ಪ್ರತಿಕ್ರಿಯಿಸಿದ್ದು, ವದಂತಿಗಳಿಗೆ ಸ್ಪಷ್ಟನೆ ಕೊಟ್ಟಿದ್ಧಾರೆ.
ಧನುಷ್ ಮತ್ತು ಮೃಣಾಲ್ ಸದ್ಯದಲ್ಲೇ ಹಸೆಮಣೆ ಏರಲಿದ್ದಾರೆ ಎಂಬ ಸುದ್ದಿ ಕಾಳ್ಗಿಚ್ಚಿನಂತೆ ಹಬ್ಬಿತ್ತು. ಆದರೆ ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಮೃಣಾಲ್, “ಧನುಷ್ ನನಗೆ ಸಹೋದರನಂತೆ. ನಮ್ಮಿಬ್ಬರ ಮಧ್ಯೆ ಇರುವುದು ಕೇವಲ ವೃತ್ತಿಪರ ಸಂಬಂಧ ಮತ್ತು ಗೌರವ ಮಾತ್ರ” ಎಂದು ಸ್ಪಷ್ಟಪಡಿಸುವ ಮೂಲಕ ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.
ತಮ್ಮ ವೈಯಕ್ತಿಕ ಜೀವನದ ಬಗ್ಗೆ ಹಬ್ಬಿರುವ ಸುಳ್ಳು ಸುದ್ದಿಗಳ ಬಗ್ಗೆ ನೋವು ವ್ಯಕ್ತಪಡಿಸಿರುವ ಮೃಣಾಲ್, ವದಂತಿ ಹಬ್ಬಿಸುವವರ ವಿರುದ್ಧ ಕಿಡಿಕಾರಿದ್ದಾರೆ. ನನ್ನ ಕಠಿಣ ಪರಿಶ್ರಮ ಮತ್ತು ಕೆಲಸದ ಮೂಲಕ ಗುರುತಿಸಿಕೊಳ್ಳಲು ನಾನು ಬಯಸುತ್ತೇನೆ. ಆದರೆ ಸಂಬಂಧವೇ ಇಲ್ಲದ ವಿಷಯಗಳಿಗೆ ನನ್ನ ಹೆಸರನ್ನು ಎಳೆದು ತರುವುದು ನಿಜಕ್ಕೂ ನೋವಿನ ಸಂಗತಿ.
ಕೇವಲ ಲೈಕ್ಸ್ ಮತ್ತು ಶೇರ್‌ಗಳಿಗಾಗಿ ಹೆಣ್ಣುಮಕ್ಕಳ ವೈಯಕ್ತಿಕ ಜೀವನದ ಬಗ್ಗೆ ಇಂತಹ ವದಂತಿಗಳನ್ನು ಏಕೆ ಸೃಷ್ಟಿಸಲಾಗುತ್ತದೆ ಎಂದು ನನಗೆ ಅರ್ಥವಾಗುತ್ತಿಲ್ಲ. ಇಂತಹ ಕೆಲಸಗಳು ನಮ್ಮ ಜೀವನದ ಮೇಲೆ ಕೆಟ್ಟ ಪರಿಣಾಮ ಬೀರುತ್ತವೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸದ್ಯ ಮೃಣಾಲ್ ಠಾಕೂರ್ ಅವರು ಸೌತ್ ಮತ್ತು ಬಾಲಿವುಡ್‌ನ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ವೈಯಕ್ತಿಕ ಬದುಕಿಗಿಂತ ವೃತ್ತಿಜೀವನದ ಕಡೆಗೆ ಹೆಚ್ಚು ಗಮನ ಹರಿಸುತ್ತಿರುವ ನಟಿ, ಇಂತಹ ಬೇಜವಾಬ್ದಾರಿ ಸುದ್ದಿಗಳು ಕಲಾವಿದರ ಮನಸ್ಸಿನ ಮೇಲೆ ಪ್ರಭಾವ ಬೀರುತ್ತವೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.




