ಒಂದಾಯ್ತು ರೌಡಿ ಬೇಬಿ ಜೋಡಿ;ಧನುಷ್ ‘ಡಿ55’ ಚಿತ್ರಕ್ಕೆ ಸಾಯಿ ಪಲ್ಲವಿ ಆನ್‌ಬೋರ್ಡ್

ರೌಡಿ ಬೇಬಿ’ ಮೂಲಕ ಸಂಚಲನ ಸೃಷ್ಟಿಸಿದ್ದ ಧನುಷ್ ಮತ್ತು ಸಾಯಿ ಪಲ್ಲವಿ ಜೋಡಿ ಈಗ ಎಂಟು ವರ್ಷಗಳ ಬಳಿಕ ಮತ್ತೆ ಬೆಳ್ಳಿಪರದೆ ಮೇಲೆ ಒಂದಾಗುತ್ತಿದೆ. ಧನುಷ್ ನಟನೆಯ 55ನೇ ಚಿತ್ರಕ್ಕೆ (D55) ಸಾಯಿ ಪಲ್ಲವಿ ಅಧಿಕೃತವಾಗಿ ಆಯ್ಕೆಯಾಗುವ ಮೂಲಕ ಈ ಹಿಟ್ ಜೋಡಿಯ ಪುನರಾಗಮನಕ್ಕೆ ವೇದಿಕೆ ಸಿದ್ಧವಾಗಿದೆ. ಈ ಹಿಂದೆ ‘ಮಾರಿ 2’ ಚಿತ್ರದಲ್ಲಿ ಇವರಿಬ್ಬರ ಅದ್ಭುತ ನೃತ್ಯ ಮತ್ತು ಕೆಮಿಸ್ಟ್ರಿ ಪ್ರೇಕ್ಷಕರ ಮನ ಗೆದ್ದಿತ್ತು. ಈಗ ಮತ್ತೆ ಈ ಜೋಡಿ ಒಂದಾಗುತ್ತಿರುವುದು ಅಭಿಮಾನಿಗಳಲ್ಲಿ ಭಾರೀ ಕುತೂಹಲ ಮತ್ತು ಸಂಭ್ರಮವನ್ನು ಮನೆಮಾಡಿದೆ.
ಡಿ55 ಚಿತ್ರದ ತಾರಾಗಣದ ಕುರಿತು ಈ ಹಿಂದೆ ಹಲವು ವದಂತಿಗಳು ಹಬ್ಬಿದ್ದವು. ವಿಶೇಷವಾಗಿ ಸ್ಯಾಂಡಲ್‌ವುಡ್ ಮತ್ತು ಟಾಲಿವುಡ್ ಖ್ಯಾತಿಯ ಶ್ರೀಲೀಲಾ ಅವರು ಈ ಚಿತ್ರಕ್ಕೆ ಆಯ್ಕೆಯಾದಾಗ, ಅವರು ಸಾಯಿ ಪಲ್ಲವಿ ಅವರ ಜಾಗವನ್ನು ಆಕ್ರಮಿಸಿದ್ದಾರೆ ಎಂದೇ ಭಾವಿಸಲಾಗಿತ್ತು. ಆದರೆ ಚಿತ್ರತಂಡ ಈಗ ನೀಡಿರುವ ಸ್ಪಷ್ಟನೆಯ ಪ್ರಕಾರ, ಈ ಬಿಗ್ ಬಜೆಟ್ ಚಿತ್ರದಲ್ಲಿ ಸಾಯಿ ಪಲ್ಲವಿ ಮತ್ತು ಶ್ರೀಲೀಲಾ ಇಬ್ಬರೂ ನಾಯಕಿಯರಾಗಿ ಕಾಣಿಸಿಕೊಳ್ಳಲಿದ್ದಾರೆ. ಬಾಲಿವುಡ್‌ನ ‘ರಾಮಾಯಣ’ ಚಿತ್ರದ ಚಿತ್ರೀಕರಣದ ಬಳಿಕ ಸಾಯಿ ಪಲ್ಲವಿ ಒಪ್ಪಿಕೊಂಡಿರುವ ಪ್ರಮುಖ ಪ್ರಾಜೆಕ್ಟ್ ಇದಾಗಿದ್ದು, ಸಿನಿ ಪ್ರೇಕ್ಷಕರಿಗೆ ಡಬಲ್ ಧಮಾಕಾ ಸಿಗುವುದು ಖಚಿತವಾಗಿದೆ.
ಈ ಚಿತ್ರವನ್ನು ‘ಅಮರನ್’ ಅಂತಹ ಬ್ಲಾಕ್‌ಬಸ್ಟರ್ ಸಿನಿಮಾ ನೀಡಿದ ಖ್ಯಾತ ನಿರ್ದೇಶಕ ರಾಜ್‌ಕುಮಾರ್ ಪೆರಿಯಸ್ವಾಮಿ ನಿರ್ದೇಶಿಸುತ್ತಿದ್ದಾರೆ. ಈ ಹಿಂದೆ ಧನುಷ್ ಅವರ ವೈಯಕ್ತಿಕ ಜೀವನದ ಏರಿಳಿತಗಳ ಸಂದರ್ಭದಲ್ಲಿ ಸಾಯಿ ಪಲ್ಲವಿ ಅವರ ಹೆಸರು ವಿನಾಕಾರಣ ಕೇಳಿ ಬಂದಿತ್ತು, ಗಾಳಿಸುದ್ದಿಗಳಿಗೆ ಸೊಪ್ಪು ಹಾಕದ ಈ ಜೋಡಿ ಮತ್ತೆ ಕೈಜೋಡಿಸುತ್ತಿದೆ. ರಾಜ್‌ಕುಮಾರ್ ಪೆರಿಯಸ್ವಾಮಿ ಅವರ ನಿರ್ದೇಶನದಲ್ಲಿ ಸಾಯಿ ಪಲ್ಲವಿ ಮತ್ತು ಧನುಷ್ ಅವರ ನಟನೆ ಯಾವ ಮಟ್ಟದ ಮ್ಯಾಜಿಕ್ ಸೃಷ್ಟಿಸಲಿದೆ ಎಂದು ನೋಡಲು ಚಿತ್ರರಂಗ ಕಾತರದಿಂದ ಕಾಯುತ್ತಿದೆ.




