ಜಿಲ್ಲೆರಾಜ್ಯಸುದ್ದಿ

ಕೇಸ್ ಇದ್ದರೂ 88ರ ವೃದ್ಧನ ಮೇಲೆ ದಬ್ಬಾಳಿಕೆ; ಮನೆಯಿಂದ ಹೊರಹಾಕಿ ಹಿಂಸೆ

ಬಾಗಲಕೋಟೆ: ಬೀಳಗಿ ತಾಲೂಕಿನ ಸಿದ್ದೇಶ್ವರ ನಗರದಲ್ಲಿ ಅಮಾನವೀಯ ಘಟನೆಯೊಂದು ಜರುಗಿದೆ. ಮನೆಯ ಒಡೆತನಕ್ಕೆ ಸಂಬಂಧಿಸಿದ ವಿವಾದ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದ್ದರೂ ಸಹ, ಅದನ್ನು ಲೆಕ್ಕಿಸದ ಕುಟುಂಬಸ್ಥರು 88 ವರ್ಷದ ವಯೋವೃದ್ಧನನ್ನ ಬಲವಂತವಾಗಿ ಮನೆಯಿಂದ ಹೊರಹಾಕಿ ದಬ್ಬಾಳಿಕೆ ನಡೆಸಿದ್ದಾರೆ.

ಸಂತ್ರಸ್ತ ಹುಸೇನಸಾಬ್ ಮುಲ್ಲಾ ಅವರು ಕಳೆದ ಹಲವು ವರ್ಷಗಳಿಂದ ಈ ಮನೆಯಲ್ಲಿ ವಾಸವಿದ್ದರು. ಹುಸೇನಸಾಬ್ ಮತ್ತು ಶಕುಂತಲಾ ಘೋರ್ಪಡೆ ಎಂಬುವವರು ಜಂಟಿಯಾಗಿ ಈ ಮನೆಯನ್ನು ನಿರ್ಮಿಸಿದ್ದರು. ಶಕುಂತಲಾ ಅವರು ವಿಜಯಪುರದ ಬಸವನಬಾಗೇವಾಡಿಯಲ್ಲಿ ನೆಲೆಸಿದ್ದರೆ, ಹುಸೇನಸಾಬ್ ಅವರು ಬೀಳಗಿಯ ಮನೆಯಲ್ಲಿ ವಾಸವಾಗಿದ್ದರು. ಆದರೆ, ಇತ್ತೀಚೆಗೆ ಶಕುಂತಲಾ ಅವರು ಹುಸೇನಸಾಬ್ ಅವರ ಗಮನಕ್ಕೆ ತರದೆ ಮನೆಯನ್ನು ದುಂಡಪ್ಪ ಎಂಬುವವರಿಗೆ ಮಾರಾಟ ಮಾಡಿದ್ದಾರೆ ಎನ್ನಲಾಗಿದ್ದು, ಇದೇ ಈಗ ವಿವಾದಕ್ಕೆ ಕಾರಣವಾಗಿದೆ.

ಪ್ರಕರಣ ನ್ಯಾಯಾಲಯದಲ್ಲಿದ್ದರೂ ಸಹ, ಏಕಾಏಕಿ ಮನೆಗೆ ನುಗ್ಗಿ ವಯೋವೃದ್ಧ ಹುಸೇನಸಾಬ್ ಅವರನ್ನು ಉಟ್ಟಬಟ್ಟೆಯಲ್ಲೇ ಮನೆಯಿಂದ ಹೊರದಬ್ಬಿದ್ದಾರೆ. ಮನನೊಂದ ವೃದ್ಧ ತೀವ್ರ ಅಸ್ವಸ್ಥರಾಗಿದ್ದಾರೆ. ಸದ್ಯ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.ಕಾನೂನು ಪ್ರಕ್ರಿಯೆ ಚಾಲ್ತಿಯಲ್ಲಿರುವಾಗ ಈ ರೀತಿ ದಬ್ಬಾಳಿಕೆ ನಡೆಸಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಸಂತ್ರಸ್ತ ಕುಟುಂಬವು ಪೊಲೀಸರ ಮಧ್ಯಪ್ರವೇಶ ಮತ್ತು ನ್ಯಾಯಕ್ಕಾಗಿ ಆಗ್ರಹಿಸಿದೆ.

Comments (0)

Your email address will not be published. Required fields are marked *

Back to top button