
ಪಾಟ್ನಾ: ಇಂದು ಬಿಹಾರ ವಿಧಾನಸಭೆ ಚುನಾವಣೆಯ ಮತ ಎಣಿಕೆ ನಡೆಯುತ್ತಿದೆ.. ರಾಜ್ಯದ 46 ಕೇಂದ್ರಗಳಲ್ಲಿ ಮತ ಎಣಿಕೆ ನಡೆಯಲಿದೆ..
ಬಿಹಾರದ 243 ಕ್ಷೇತ್ರಗಳಿಗೆ ಎರಡು ಹಂತದಲ್ಲಿ ಮತದಾನ ನಡೆದಿದೆ. ಈ ಬಾರಿಯಂತೂ ಬಿಹಾರದ ಜನ ದಾಖಲೆಯ ಪ್ರಮಾಣದಲ್ಲಿ ಮತ ಚಲಾಯಿಸಿದ್ದಾರೆ. ಇದರಲ್ಲಿ ಮಹಿಳಾ ಮತದಾರರದ್ದು ಮೇಲುಗೈ. ಹೀಗಾಗಿ ಫಲಿತಾಂಶ ಕುತೂಹಲ ಕೆರಳುವಂತೆ ಮಾಡಿದೆ. ಎನ್ಡಿಎ ಗೆದ್ದು ನಿತೀಶ್ ಮತ್ತೆ ಅಧಿಕಾರದ ಗದ್ದುಗೆ ಏರುವ ತವಕದಲ್ಲಿದ್ದರೆ, ಮಹಾಘಟಬಂಧನದ ಯುವ ನಾಯಕ ತೇಜಸ್ವಿ ಯಾದವ್, ಗೆಲುವಿನ ಭಾಗ್ಯಕ್ಕೆ ಎದುರು ನೋಡುತ್ತಿದ್ದಾರೆ.
ಮತದಾನೋತ್ತರ ಸಮೀಕ್ಷೆಗಳು ಎನ್ಡಿಎ ಸರ್ಕಾರ ರಚನೆ ಆಗುವ ಬಗ್ಗೆ ಭವಿಷ್ಯ ನುಡಿದಿವೆ. ಹೀಗಾಗಿಯೇ ಜೆಡಿಯು ಸೇರಿ ಬಿಜೆಪಿ ಮಿತ್ರಪಕ್ಷಗಳಲ್ಲಿ ಸಂಭ್ರಮ ಈಗಾಗಲೇ ಮನೆ ಮಾಡಿದೆ. ಏತನ್ಮಧ್ಯೆ, ಪಾಟ್ನಾದ ಜೆಡಿಯು ಕಚೇರಿಯ ಹೊರಗೆ ‘ಟೈಗರ್ ಅಭಿ ಜಿಂದಾ ಹೇ’, ಅಂದರೆ ಹುಲಿ ಇನ್ನೂ ಜೀವಂತವಾಗಿದೆ ಎನ್ನುವ ಪೋಸ್ಟರ್ಗಳು ರಾರಾಜಿಸುತ್ತಿವೆ. ಭರ್ಜರಿ ಗೆಲುವಿನ ವಿಶ್ವಾಸದಲ್ಲಿರುವ ಜೆಡಿಯು ಕಾರ್ಯಕರ್ತರು, ಸಂಭ್ರಮಾಚರಣೆಯ ತಯಾರಿಯಲ್ಲಿದ್ದಾರೆ. ಇದಕ್ಕೆ RJDಯ ಬೆಂಬಲಿತ ಸಮಾಜವಾದಿ ಪಕ್ಷ ಕೌಂಟರ್ ಕೊಟ್ಟಿದೆ. ‘ಅಲ್ವಿದಾ ಚಾಚಾ’ ಅಂದರೆ ಬಾಯ್ ಬಾಯ್ ಚಿಕ್ಕಪ್ಪ ಎನ್ನುವ ಮೂಲಕ ನಿತೀಶ್ ಕುಮಾರ್ ಕಾಲೆಳೆದಿದೆ.
ಎಕ್ಸಿಟ್ ಪೋಲ್‌ಗಳು ಎನ್‌ಡಿಎಗೆ ಅಧಿಕಾರ ಸಿಗುತ್ತೆ ಅಂತ ಹೇಳಿವೆ. ಇಂಡಿಯಾ ಒಕ್ಕೂಟದ ಸಿಎಂ ಅಭ್ಯರ್ಥಿ ತೇಜಸ್ವಿ ಯಾದವ್ ಈ ಸಮೀಕ್ಷೆ ಫಲಿತಾಂಶಗಳು ಸುಳ್ಳಾಗಲಿವೆ ಎಂದಿದ್ದಾರೆ.




