Tuesday, March 3, 2026
22.4 C
Bengaluru
Google search engine
LIVE
ಮನೆUncategorizedಆಶಾ ಕಾರ್ಯಕರ್ತೆಯಿಂದ ಮತಾಂತರ ಆರೋಪ : ಶಾಂತಿ ಸಭೆ ವೇಳೆ ಗದ್ದಲ

ಆಶಾ ಕಾರ್ಯಕರ್ತೆಯಿಂದ ಮತಾಂತರ ಆರೋಪ : ಶಾಂತಿ ಸಭೆ ವೇಳೆ ಗದ್ದಲ

ವಿಜಯಪುರ : ವಿಜಯಪುರ ಜಿಲ್ಲೆ ಬಸವನ ಬಾಗೇವಾಡಿ ತಾಲ್ಲೂಕಿನ‌ ಉಪ್ಪಲದಿನ್ನಿ ಎಲ್.ಟಿ. 1 ರಲ್ಲಿ ಆಶಾ ಕಾರ್ಯಕರ್ತೆಯೊಬ್ಬರು ಗ್ರಾಮದಲ್ಲಿ ನಾಲ್ಕು ಕುಟುಂಬಗಳನ್ನು ಕ್ರೈಸ್ತ ಸಮುದಾಯಕ್ಕೆ ಮತಾಂತರ ಮಾಡಿದ್ದಾರೆಂಬ ಆರೋಪ ಗ್ರಾಮಸ್ಥರಿಂದ ಕೇಳಿಬಂದಿದೆ.

ಬಸವನಬಾಗೇವಾಡಿ ತಾಲೂಕಿನ ಉಪ್ಪಲದಿನ್ನಿ ಎಲ್.ಟಿ 1 ರಲ್ಲಿ ಆಶಾ ಕಾರ್ಯಕರ್ತೆ ವಿಜಯಲಕ್ಷ್ಮಿ ಅಶೋಕಕುಮಾರ ಲಮಾಣಿ ಎನ್ನುವವರು ಗ್ರಾಮದಲ್ಲಿ ಜನರನ್ನು ಮತಾಂತರ ಮಾಡುತ್ತಿದ್ದಾರೆಂದು ಆರೋಪಿಸಿ ಗ್ರಾಮಸ್ಥರು ಇತ್ತಿಚೆಗೆ ತಹಶಿಲ್ದಾರ ಅವರಿಗೆ ಮನವಿ ಸಲ್ಲಿಸಿದ್ದರು. ಅಲ್ಲದೇ ಗ್ರಾಮಸ್ಥರು ಹಾಗೂ ಆಶಾ ಕಾರ್ಯಕರ್ತೆ ಬಸವನಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ಪರಸ್ಪರ ದೂರು, ಪ್ರತಿದೂರು ಸಲ್ಲಿಸಿದ್ದಾರೆ. ಈ ನಡುವೆ ತಹಶಿಲ್ದಾರ ಯಮನಪ್ಪ ಹಾಗೂ ಸಿಪಿಐ ಶರಣಗೌಡ ನ್ಯಾಮಗೌಡರ ಅವರ ಸಮ್ಮುಖದಲ್ಲಿ ಗ್ರಾಮದಲ್ಲಿ ಶಾಂತಿ ಸಭೆ ಕರೆಯಲಾಗಿತ್ತು. ಈ ವೇಳೆ ಗ್ರಾಮಸ್ಥರು ಹಾಗೂ ಆಶಾ ಕಾರ್ಯಕರ್ತೆ ನಡುವೆ ವಾಗ್ವಾದ, ಗದ್ದಲ ಉಂಟಾಗಿದೆ.

ಸಭೆಯಲ್ಲಿ‌ ಆಶಾ ಕಾರ್ಯಕರ್ತೆ ತಾಂಡಾದ ನಾಲ್ಕು ಕುಟುಂಬಗಳನ್ನು ಮತಾಂತರ ಮಾಡಿದ್ದಾರೆ ಎಂದು ಗ್ರಾಮಸ್ಥರು ದೂರಿದ್ದಾರೆ. ಮತಾಂತರ ವಿಚಾರವಾಗಿ ಪ್ರಶ್ನಿಸಿದ ತಾಂಡಾದ‌ ಕಾರಭಾರಿ ಧನಸಿಂಗ್ ಲಮಾಣಿ, ತಾಂಡಾದ‌ ನಾಯಕ ರಾಜು ನಾಯಕ್ ಹಾಗೂ ಇತರರ ಮೇಲೆ ಆಶಾ ಕಾರ್ಯಕರ್ತೆ ವಿಜಯಲಕ್ಷ್ಮಿ ಹಾಗೂ ಅವರ ಪತಿ ತಾಂಡಾದ ಹಿರಿಯರು ನಮಗೆ ಕಿರುಕುಳ‌ ನೀಡುತ್ತಿದ್ದಾರೆಂದು ಪೊಲೀಸರಿಗೆ ದೂರು ನೀಡಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿ ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಆಕ್ರೋಶಗೊಂಡ ಆಶಾ ಕಾರ್ಯಕರ್ತೆ ವಿಜಯಲಕ್ಷ್ಮೀ ಮತಾಂತರ ನನ್ನ ಇಷ್ಟ ಎಂದು ಮುಖಂಡರ ಜೊತೆಗೆ ವಾಗ್ವಾದ ನಡೆಸಿ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಅಧಿಕಾರಿಗಳ ಮುಂದೆಯೇ ಬೆದರಿಕೆ ಹಾಕಿದ್ದಾಳೆ ಎಂದು ತಿಳಿದುಬಂದಿದೆ. ಲಂಬಾಣಿ ಸಮುದಾಯದ ಮೀಸಲಾತಿ ಬಳಸಿಕೊಂಡು ಮತಾಂತರ ಕಾರ್ಯ ಮಾಡುವುದು ಸರಿಯಲ್ಲ, ಮತಾಂತರ ಕಾರ್ಯ ನಿಲ್ಲಿಸಿ ಎಂದು ತಾಂಡಾದದ ಜನರು ಮನವಿ‌ ಮಾಡಿಕೊಂಡಿದ್ದಾರೆ. ಸಭೆಯಲ್ಲಿ ಇಡೀ ತಾಂಡಾದ ಜನ ಒಂದೆಡೆಯಾದರೆ ಆಶಾ ಕಾರ್ಯಕರ್ತೆ ಒಂದೆಡೆಯಾಗಿ ವಾಗ್ವಾದ ಸೃಷ್ಟಿಯಾಯಿತು.

ಸದ್ಯ ಉಪ್ಪಲದಿನ್ನಿ ತಾಂಡಾದಲ್ಲಿ ಶಾಂತಿ‌ ಕದಡದಂತೆ ಮುಂಜಾಗ್ರತಾ ಕ್ರಮವಾಗಿ ಪೊಲೀಸರು ಬೀಡು ಬಿಟ್ಟಿದ್ದು, ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ.

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments