
ವಿಜಯಪುರ : ವಿಜಯಪುರ ಮಹಾನಗರ ಪಾಲಿಕೆ ಮೇಯರ್ ಹಾಗೂ ಉಪಮೇಯರ್ ಸ್ಥಾನಕ್ಕೆ ಚುನಾವಣೆ ನಡೆಸಿದ್ದು, ಎರಡೂ ಸ್ಥಾನದಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿದೆ. ವಿಜಯಪುರ ಪಾಲಿಕೆ ಮೇಯರ್ ಆಗಿ ಕಾಂಗ್ರೆಸ್ನ ಮೆಹಜಬೀನ್ ಹೊರ್ತಿ ಆಯ್ಕೆಯಾಗಿದ್ದಾರೆ. ಉಪ ಮೇಯರ್ ಆಗಿ ಕಾಂಗ್ರೆಸ್ನ ದಿನೇಶ್ ಹಳ್ಳಿ ಆಯ್ಕೆಯಾಗಿದ್ದಾರೆ. ಈ ಮೂಲಕ ಕಾಂಗ್ರೆಸ್ ವಿಜಯಪುರ ಮಹಾನಗರ ಪಾಲಿಕೆಯನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದ್ದು, ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ಗೆ ಮುಖಭಂಗವಾಗಿದೆ.

ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದ ವಿಜಯಪುರ ಪಾಲಿಕೆ ಮೇಯರ್ ಸ್ಥಾನಕ್ಕೆ ಸ್ಪರ್ಧಿಸಿದ್ದ ಮೆಹಜಬೀನ್ ಹೊರ್ತಿ ಒಟ್ಟು 22 ಮತ ಪಡೆದು ಮೇಯರ್ ಆಗಿ ಆಯ್ಕೆಯಾಗಿದ್ದಾರೆ. ಇನ್ನು ಎಸ್ಟಿಗೆ ಮೀಸಲಾಗಿದ್ದ ಉಪಮೇಯರ್ ಸ್ಥಾನಕ್ಕೆ ಕಾಂಗ್ರೆಸ್ನ ದಿನೇಶ್ ಹಳ್ಳಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಈ ವಿಚಾರವಾಗಿ ವಿಜಯಪುರದಲ್ಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಪ್ರತಿಕ್ರಿಯೆ ನೀಡಿದ್ದು, ಇದು ಅಕ್ರಮದ ಚುನಾವಣೆ.. ಇದನ್ನ ನಾವು ಒಪ್ಪಲ್ಲ. ರಾಜ್ಯ ಸರ್ಕಾರದ ಅಣತಿಯಂತೆ ಚುನಾವಣಾಧಿಕಾರಿಗಳು ನಡೆದುಕೊಂಡಿದ್ದಾರೆ ಎಂದು ಹೇಳಿದರು.
ಈ ಚುನಾವಣೆ ಸಂಪೂರ್ಣ ಅಕ್ರಮವಾಗಿ ನಡೆದಿದೆ. ಇದರ ಬಗ್ಗೆ ನಾವು ಕೋರ್ಟ್ ಮೆಟ್ಟಿಲು ಏರುತ್ತೇವೆ. ಬಿಜೆಪಿ ಶಾಸಕರು, ಸಂಸದರು ಪಾಲಿಕೆ ಸದಸ್ಯರು ಎಲ್ಲರೂ ಒಗ್ಗಟ್ಟಾಗಿ ಈ ಬಾರಿ ಚುನಾವಣೆ ಎದುರಿಸಿದ್ದೇವೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ಸ್ಪಷ್ಟಪಡಿಸಿದರು.




