ಗದಗ : ಕಾನೂನು ಸಚಿವರ ತವರಿನಲ್ಲೇ ಅಮಾನುಷ ಕೃತ್ಯ ..!

ಗದಗ : ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಹಾಗೂ ಫೈನಾನ್ಸ್ ಕಂಪನಿಳ ಹಾವಳಿ ಹೆಚ್ಚಾಗಿರುವ ಹೊತ್ತಲ್ಲೇ ಇದೀಗ ಮೀಟರ್ ಬಡ್ಡಿ ದಂಧೆ ಕೂಡ ಸದ್ದು ಮಾಡುತ್ತಿದೆ. ಅದರಲ್ಲೂ ಕಾನೂನು ಸಚಿವರ ತವರಿನಲ್ಲೇ ನಡೆದ ಈ ಅಮಾನುಷ ಕೃತ್ಯ ಕೇಳಿದ್ರೆ ಬೆಚ್ಚಿ ಬೀಳುತ್ತೀರಿ.
ಹೌದು, ಕಾನೂನು ಸಚಿವ ಹೆಚ್.ಕೆ.ಪಾಟೀಲ್ ತವರು ಕ್ಷೇತ್ರ ಗದಗದಲ್ಲಿ ಸಾಲಗಾರನನ್ನು ಸಿನಿಮೀಯ ರೀತಿ ಹೊತ್ತೊಯ್ದು ಚಿತ್ರಹಿಂಸೆ ನೀಡಿರುವ ಘಟನೆ ನಡೆದಿದೆ.ಒಂದು ಲಕ್ಷ ಸಾಲಕ್ಕಾಗಿ ಈ ಕೃತ್ಯ ನಡೆದಿದೆ ಎಂದು ತಿಳಿದುಬಂದಿದೆ. ಬಡ್ಡಿ ದಂಧೆಕೋರರು ದಶರಥ ಬಳ್ಳಾರಿ ಅವರನ್ನು ಸಿನಿಮೀಯ ರೀತಿ ಕರೆದೊಯ್ದು ರೂಂ ನಲ್ಲಿ ಕೂಡಿಹಾಕಿ ಆನಂತರ ಆತನನ್ನು ಅರೆ ಬೆತ್ತಲೆ ಮಾಡಿ ರಾತ್ರಿಯಿಡೀ ಹಿಗ್ಗಾಮುಗ್ಗಾ ಥಳಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಗದಗ ನಗರದ ಡಿಸಿ ಮಿಲ್ ನಿವಾಸಿ ದಶರಥ ಬಳ್ಳಾರಿ ಎಂಬ ವ್ಯಕ್ತಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಲಾಗಿದೆ. ಮಂಜು, ಮಂಜುನಾಥ, ಮಹೇಶ, ಹನುಮಂತ ಅವರಿಂದ ಹಲ್ಲೆ ನಡೆದಿದೆ ಎನ್ನುವ ಆರೋಪ ಕೇಳಿಬಂದಿದೆ. ಈ ಘಟನೆ ಜನವರಿ 21 ರಂದು ರಾತ್ರಿ ನಡೆದಿದೆ. ದೂರು ದಾಖಲಾದ್ರೂ ಆರೋಪಿಗಳ ಬಂಧನವಾಗಿಲ್ಲ ಎನ್ನುವ ಆರೋಪ ಕೇಳಿಬಂದಿದೆ.




