Top Newsಕ್ರೈಂ ಸ್ಟೋರಿರಾಜಕೀಯರಾಜ್ಯಸುದ್ದಿ

ಕೋವಿಡ್​​ ಅಕ್ರಮ ಆರೋಪ: ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದಾಖಲಾಯ್ತು ಎಫ್ಐಆರ್

ಬೆಂಗಳೂರು: ಮಹಾಮಾರಿ ಕೊರೊನಾ ಬಿಕ್ಕಟ್ಟಿನ ವೇಳೆ ಪಿಪಿಇ ಕಿಟ್ ಹಾಗೂ ಎನ್ 95 ಮಾಸ್ಕ್​ ಗಳನ್ನು ನಿಯಮಬಾಹಿರವಾಗಿ ಖರೀದಿಸಿ ಸರ್ಕಾರ ಬೊಕ್ಕಸಕ್ಕೆ ಸುಮಾರು 167 ಕೋಟಿ ರೂ. ನಷ್ಟ ಮಾಡಿದ ಆರೋಪದ ಸಂಬಂಧ ಖಾಸಗಿ ಕಂಪನಿಗಳ ಮಾಲೀಕರು ಹಾಗೂ ವೈದ್ಯಕೀಯ ಇಲಾಖೆಯ ಅಧಿಕಾರಿಗಳ ವಿರುದ್ಧ ವಿಧಾನಸೌಧ ಠಾಣೆ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.

ವೈದ್ಯಕೀಯ ಶಿಕ್ಷಣ ಇಲಾಖೆ ಮುಖ್ಯ ಲೆಕ್ಕಾಧಿಕಾರಿಯಿಂದ ದೂರು ದಾಖಲಾಗಿದೆ. ಚೀಫ್‌ ಅಕೌಂಟೆಂಟ್ ಡಾ. ವಿಷ್ಣುಪ್ರಸಾದ್ ಅವರು ದೂರು ನೀಡಿದ್ದು, ಈ ದೂರು ಆಧರಿಸಿ ವಿಧಾನಸೌಧ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

ಕೋವಿಡ್ ಸಮಯದ ಹಗರಣ ತನಿಖೆಗಾಗಿ ಎಸ್ಐಟಿ ರಚನೆಗೆ ರಾಜ್ಯ ಸರ್ಕಾರ ತೀರ್ಮಾನ ಮಾಡಿತ್ತು. ಎನ್-95 ಮಾಸ್ಕ್, ಪಿಪಿಇ ಕಿಟ್ ಮತ್ತು ಇತರೆ ಸಾಮಾಗ್ರಿಗಳ ಖರೀದಿಯಲ್ಲಿ ಅಕ್ರಮದ ಆರೋಪ ಕೇಳಿ ಬಂದಿತ್ತು. ಷಡ್ಯಂತ್ರ ರೂಪಿಸಿ ಸಾರ್ವಜನಿಕ ಹಣವನ್ನು ದುರ್ಬಳಕೆ ಆರೋಪವೂ ಇತ್ತು.

2020ರ ಆಗಸ್ಟ್ 18ರಂದು ಸರ್ಕಾರ ವತಿಯಿಂದ ಆಡಳಿತಾತ್ಮಕ ಹಾಗೂ ಕಾನೂನಾತ್ಮಕ 2.59 ಲಕ್ಷ ಎನ್ 95 ಮಾಸ್ಕ್ ಹಾಗೂ 2.59 ಪಿಪಿಇ ಕಿಟ್ ಖರೀದಿಸಲು ಅನುಮತಿ ಪಡೆದುಕೊಳ್ಳಲಾಗಿತ್ತು. ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿ, ರಾಜ್ಯದ 17 ಸರ್ಕಾರಿ ಕಾಲೇಜು ಹಾಗೂ ಒಂದು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಬಳಸಲು ಅನುಮೋದನೆ ನೀಡಲಾಗಿತ್ತು. ಅನುಮೋದನೆ ಪಡೆಯುವಾಗ ಕೆಟಿಪಿಪಿ ಕಾನೂನಿನ ಕಾಯ್ದೆಗಳನ್ನು ಪೂರ್ಣ ಪ್ರಮಾಣದಲ್ಲಿ ಪಾಲಿಸಬೇಕು. 41.35 ಕೋಟಿ ರೂ.ಗಿಂತ ಮೌಲ್ಯದ ಹೆಚ್ಚು ಸಾಮಗ್ರಿ ಖರೀದಿಸಕೂಡದು ಎಂದು ಷರತ್ತು ವಿಧಿಸಲಾಗಿತ್ತು. ಇದರ ನಂತರ ವೈದ್ಯಕೀಯ ಶಿಕ್ಷಣ ಇಲಾಖೆಯು ಟೆಂಡ‌ರ್ ಕರೆದಿದ್ದು, ಲಾಜ್ ಕೋರ್ಟ್ಸ್ ಸಂಸ್ಥೆಯು ಒಂದು ಪಿಪಿಇ ಕಿಟ್ ಸರಬರಾಜು ಮಾಡುವುದಾಗಿ ಬಿಡ್ ಪಡೆದುಕೊಂಡಿತ್ತು‌. ನಿಗದಿತ ಸಂಖ್ಯೆಯ ಪಿಪಿಇ ಕಿಟ್​​​ಗಳನ್ನು 15 ದಿನಗಳೊಳಗೆ ಸರಬರಾಜು ಮಾಡಲು ಆದೇಶಿಸಿದ್ದರೂ ಪಿಇಇ ಕಿಟ್‌ ಗಳನ್ನು 17 ಸರ್ಕಾರಿ ವೈದ್ಯಕೀಯ ಕಾಲೇಜುಗಳಿಗೆ ಒಂದು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ನೀಡಿರುವ ಬಗ್ಗೆ ಯಾವುದೇ ದಾಖಲೆಗಳಲ್ಲಿ ನಮೂದಿಸಿಲ್ಲ ಎಂದು ಎಫ್ಐಆರ್​ ನಲ್ಲಿ ಉಲ್ಲೇಖಿಸಲಾಗಿದೆ.

Comments (0)

Your email address will not be published. Required fields are marked *

Back to top button