Top Newsರಾಜಕೀಯಸುದ್ದಿ

ನಾನು ಸಂಸದನಾಗಲು, ಶಾಸಕನಾಗಲು ಹಪಹಪಿಸಿಲ್ಲ: ನಿಖಿಲ್

ಹಾಸನ  ಜಿಲ್ಲೆ, ಅರಕಲಗೂಡಿನಲ್ಲಿ ಮಾಜಿಸಚಿವ ಎ.ಮಂಜು ಅವರ ಹುಟ್ಟುಹಬ್ಬ ಹಾಗೂ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಹಾಸನ ಜಿಲ್ಲೆಯ ಜನತೆ ಒಬ್ಬ ಸಾಧಾರಣ ರೈತ ಕುಟುಂಬದ ಮಗನಾಗಿ ಜನಿಸಿರುವ ದೇವೇಗೌಡರನ್ನು ಕೆಂಪುಕೋಟೆ ಮೇಲೆ ಬಾವುಟ ಹಾರಿಸುವ ಶಕ್ತಿಯನ್ನು ತುಂಬಿ ಇತಿಹಾಸ ಸೃಷ್ಟಿ ಮಾಡಿದ್ದಾರೆ. ನಿಮ್ಮ ಹೃದಯದಲ್ಲಿ ನಮ್ಮ ಕುಟುಂಬದ ಮೇಲೆ ಇಟ್ಟಿರುವ ಪ್ರೀತಿ, ಗೌರವ ಎಷ್ಟು ಜನ್ಮ ಎತ್ತಿ ಬಂದರೂ ತೀರಿಸಲು ಸಾಧ್ಯವಿಲ್ಲ. ನಿಮ್ಮ ಋಣಕ್ಕಾಗಿ ಪ್ರಾಮಾಣಿಕವಾಗಿ ನಮ್ಮ ಇಡೀ ಪಕ್ಷ, ನಮ್ಮ ಕುಟುಂಬ ನಿಮ್ಮ ಜೊತೆಯಲ್ಲಿ ಸದಾಕಾಲ ಇರುತ್ತೇವೆ. ರಾಮನಗರ ಜಿಲ್ಲೆಯ ಜನತೆ ಕೂಡ ನಮ್ಮ ಕುಟುಂಬಕ್ಕೆ ಎಂಟು ಬಾರಿ ಶಾಸಕ ಸ್ಥಾನ, ಮೂರು ಬಾರಿ ಕುಮಾರಣ್ಣ ಅವರನ್ನು ಸಂಸದರನ್ನಾಗಿ ಆಯ್ಕೆ ಮಾಡಿದ್ದಾರೆ ಎಂದರು.

ಚುನಾವಣೆಯಲ್ಲಿ ಏಳುಬೀಳು ಸರ್ವೇ ಸಾಮಾನ್ಯ. ನಾನು ರಾಜಕಾರಣದ ಹಿನ್ನೆಲೆಯಲ್ಲಿ ಬಂದಿರುವ ವ್ಯಕ್ತಿಯಾಗಿದ್ದರೂ ಚಿತ್ರರಂಗದಲ್ಲಿ ನನ್ನದೇ ಆದಷ್ಟು ಸವಾಲುಗಳನ್ನು ಸ್ವೀಕಾರ ಮಾಡಿದೆ. ಜಾಗ್ವಾರ್ ಮೂಲಕ ನಮ್ಮ ತಂದೆ ನನ್ನನ್ನು ಚಿತ್ರರಂಗಕ್ಕೆ ಪರಿಚಯಿಸಿದ್ದು, ಅನೇಕ ಚಿತ್ರಗಳನ್ನು ಮಾಡಿದೆ. ತದನಂತರ ಸಾರ್ವಜನಿಕ ಬದುಕಿನಲ್ಲಿ ಜವಾಬ್ದಾರಿಗಳನ್ನು ಅರಿತಿದ್ದೇನೆ. ಆ ಒಂದು ಕಾರಣದಿಂದ ಸಂಪೂರ್ಣವಾಗಿ ಸಾರ್ವಜನಿಕ ಬದುಕಿಗೆ ಧುಮುಕಿದ್ದೇನೆ ಎಂದು ಹೇಳಿದರು.

ದೇವೇಗೌಡರಿಗೆ 92 ವಯಸ್ಸಾದರೂ ರಾಜ್ಯಸಭೆಯಲ್ಲಿ ಏಕಾಂಗಿಯಾಗಿ ನೆಲ, ಜಲ, ಭಾಷೆ ಉಳಿಸುವ ಕೆಲಸ ಮಾಡುತ್ತಿದ್ದಾರೆ. ನನ್ನ ಜೀವನದ ಸ್ಪೂರ್ತಿ ದೇವೇಗೌಡರು. ನನ್ನ ಜವಾಬ್ದಾರಿಯನ್ನು ಅರಿತಿದ್ದೇನೆ. ಅನಿರೀಕ್ಷಿತವಾದ ಬೆಳವಣಿಗೆಯಿಂದ ಉಪಚುನಾವಣೆಯಲ್ಲಿ ಸ್ಪರ್ಧಿಸಬೇಕಾಗಿ ಬಂತು. ಈ ಚುನಾವಣೆಯ ಸೋಲಿನ ಬಗ್ಗೆ ಹೆಚ್ಚಾಗಿ ಪರಾಮರ್ಶೆ ಮಾಡಲ್ಲ. ಕರ್ನಾಟಕ ರಾಜ್ಯದಲ್ಲಿ ಕಟ್ಟಿರುವ ರೈತ ಪರವಾದ ಪಕ್ಷ, ಪ್ರಾದೇಶಿಕ ಪಕ್ಷ ಜೆಡಿಎಸ್. ಲಕ್ಷಾಂತರ ಕಾರ್ಯಕರ್ತರ ದುಡಿಮೆ, ಎಲ್ಲಾ ತಂದೆ, ತಾಯಿಯರ ಆಶೀರ್ವಾದ, ರೈತರ ಆಶೀರ್ವಾದ ಮಾಡಿ ಇಲ್ಲಿಯವರೆಗೆ ಬೆಳೆಸಿ, ಉಳಿಸಿದ್ದೀರಿ. ಹಲವಾರು ಸಂದರ್ಭದಲ್ಲಿ ಅಖಾಡ ಸಿದ್ಧವಾಗಿತ್ತು. ಬಹಳ ಸುಲಭವಾಗಿ ಶಾಸಕನಾಗಬಹುದಿತ್ತು. ಆದರೆ ಇಲ್ಲಿಯವರೆಗೂ ನಾನು, ಪಕ್ಷ ಸಂಕಷ್ಟದಲ್ಲಿತ್ತು. ಆ ಸಂದರ್ಭದಲ್ಲಿ ಒಬ್ಬ ಪಕ್ಷದ ಶಿಸ್ತಿನ ಸಿಪಾಯಿಯಾಗಿ, ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ಪಕ್ಷದ ಕಾರ್ಯಕರ್ತರ ಭಾವನೆಗಳಿಗೆ ಸ್ಪಂದಿಸುವ ಕೆಲಸ ಮಾಡಿದ್ದೇನೆ. 19 ಸ್ಥಾನ ಗೆದ್ದು 18ಕ್ಕೆ ಇಳಿದಿದ್ದೇವೆ. ನಿಮ್ಮೆಲ್ಲರ ಆಶೀರ್ವಾದಿಂದ ಇಡೀ ರಾಜ್ಯ ಪ್ರವಾಸ ಮಾಡುತ್ತೇನೆ. ಮೂಲೇಲಿ ಕೂರುವ ಜಾಯಮಾನ ನನ್ನದಲ್ಲ ಎಂದು ನುಡಿದರು.

Comments (0)

Your email address will not be published. Required fields are marked *

Back to top button