Top Newsರಾಜಕೀಯರಾಜ್ಯಸುದ್ದಿ

ಬಾರ್​ಗೆ ಪರವಾನಗಿ ನೀಡಲು ಲಂಚದ ಆರೋಪ: ಎಫ್​ಐಆರ್ ದಾಖಲಾದರೆ ಚಲುವರಾಯಸ್ವಾಮಿಗೂ ಸಂಕಷ್ಟ

ಮಂಡ್ಯ: ಮಂಡ್ಯದ ಚಂದೂಪುರದಲ್ಲಿ ಬಾರ್ ಆ್ಯಂಡ್ ರೆಸ್ಟೋರೆಂಟ್​​ಗೆ ಪರವಾನಗಿ ನೀಡಲು ಲಂಚ ಕೇಳಿದ ಪ್ರಕರಣ ಸಂಬಂಧ ನೀಡಲಾಗಿರುವ ದೂರಿನ ಜತೆ ಸಲ್ಲಿಕೆಯಾಗಿರುವ ಆಡಿಯೋ ಮತ್ತು ವಿಡಿಯೋ ಸಾಕ್ಷ್ಯದ ಸತ್ಯಾಸತ್ಯತೆ ಅರಿಯಲು ಲೋಕಾಯುಕ್ತ ಮುಂದಾಗಿದೆ. ಎಫ್​ಐಆರ್​ ದಾಖಲಿಸುವ ಮುನ್ನವೇ ಲೋಕಾಯುಕ್ತ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಒಂದು ವೇಳೆ ಎಫ್​ಐಆರ್ ದಾಖಲಾದರೆ ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿಗೂ ಸಂಕಷ್ಟ ಎದುರಾಗಲಿದೆ. ಯಾಕೆಂದರೆ, ದೂರುದಾರರು ಸಲ್ಲಿಸಿರುವ ಆಡಿಯೋ ಸಂಭಾಷಣೆಯಲ್ಲಿ ಸಚಿವ ಸಲುವರಾಯಸ್ವಾಮಿ ಬಗ್ಗೆಯೂ ಪ್ರಸ್ತಾಪವಾಗಿದೆ.

ದೂರುದಾರ ಸಲ್ಲಿಸಿರುವ ಅಧಿಕಾರಿ ಮತ್ತು ದೂರುದಾರನ ಮಧ್ಯೆ ನಡೆದಿದೆ ಎನ್ನಲಾದ ಸಂಭಾಷಣೆಯಲ್ಲಿ ಸಚಿವರ ಬಗ್ಗೆ ಪ್ರಸ್ತಾಪವಾಗಿದೆ. ಈ ವಿಚಾರ ಇಟ್ಟುಕೊಂಡು ಚಲುವರಾಯಸ್ವಾಮಿ ವಿರುದ್ಧ ಜೆಡಿಎಸ್ ಆಕ್ರೋಶ ವ್ಯಕ್ತಪಡಿಸಿದೆ.

ಲಂಚದಲ್ಲಿ ಸಚಿವರಿಗೂ ಪಾಲು: ಜೆಡಿಎಸ್ ವಾಗ್ದಾಳಿ

ಬಾರ್ ಲೈಸೆನ್ಸ್​ನಲ್ಲಿಯೂ ಲಂಚ ವಸೂಲಿ ನಡೆಯುತ್ತಿದ್ದು. ಸಚಿವರ ಮುಂದಾಳತ್ವದಲ್ಲೇ ಅಧಿಕಾರಿಗಳು ಲೈಸೆನ್ಸ್​​​ ನೀಡಲು ರೇಟ್ ಫಿಕ್ಸ್ ಮಾಡಿದ್ದಾರೆ. ಈ ಭ್ರಷ್ಟಾಚಾರದಲ್ಲಿ ಸಚಿವರಿಗೂ ಪಾಲು ಹೋಗುತ್ತದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಜೆಡಿಎಸ್ ಗಂಭೀರ ಆರೋಪ ಮಾಡಿದೆ.

ಈ ಎಲ್ಲ ಬೆಳವಣಿಗೆಗಳ ಬೆನ್ನಲ್ಲೇ, ದೂರಿನ ವಾಸ್ತವತೆ ಅರಿಯಲು ಲೋಕಾಯುಕ್ತ ಪೊಲೀಸರು ಮುಂದಾಗಿದ್ದಾರೆ. ದೂರುದಾರ ಪುನೀತ್ ನೀಡಿರುವ ಸಾಕ್ಷ್ಯಗಳ ಬಗ್ಗೆ ಲೋಕಾಯುಕ್ತ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಎರಡ್ಮೂರು ದಿನಗಳಲ್ಲಿ ಪ್ರಾಥಮಿಕ ತನಿಖೆ ನಡೆಸಿ ಡಿಐಜಿಗೆ ವರದಿ ಸಲ್ಲಿಸಲಿದ್ದಾರೆ. ಒಂದು ವೇಳೆ, ಲೋಕಾಯುಕ್ತ ಡಿಐಜಿ ಆದೇಶ ನೀಡಿದರೆ ಎಫ್ಐಆರ್ ದಾಖಲಿಸಲು ನಿರ್ಧರಿಸಲಾಗಿದೆ ಎಂದು ಮಂಡ್ಯ ಲೋಕಾಯುಕ್ತ ಎಸ್​​ಪಿ ಸುರೇಶಬಾಬು ಮಾಹಿತಿ‌ ನೀಡಿದ್ದಾರೆ.

ಏನಿದು ಅಬಕಾರಿ ಲಂಚ ಪ್ರಕರಣ?

ಚಂದೂಪುರದಲ್ಲಿ ಬಾರ್ ಆ್ಯಂಡ್ ರೆಸ್ಟೋರೆಂಟ್​​ಗೆ ಅನುಮತಿ ಪಡೆಯಲು ಲಕ್ಷ್ಮಮ್ಮ ಎಂಬುವವರ ಹೆಸರಿನಲ್ಲಿ ಅರ್ಜಿ ಸಲ್ಲಿಸಲಾಗಿತ್ತು. ಈ ಅರ್ಜಿಯನ್ನು ಲಕ್ಷ್ಮಮ್ಮ ಪುತ್ರ ಪುನೀತ್ ಎಂಬವರು ಸಲ್ಲಿಸಿದ್ದರು. ಆರಂಭದಲ್ಲಿ ಆನ್‌ಲೈನ್ ಮೂಲಕ ಸಲ್ಲಿಸಿದ ಅರ್ಜಿಯನ್ನು ತಿರಸ್ಕರಿಸಲಾಗಿತ್ತು, ಮತ್ತು ನಂತರ ಅವರು ಕಚೇರಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಿದ್ದರು. ಬಳಿಕ, ಅಬಕಾರಿ ಇಲಾಖೆ ಅಧಿಕಾರಿಗಳು 40 ಲಕ್ಷ ರೂ. ಲಂಚದ ಬೇಡಿಕೆ ಇಟ್ಟಿದ್ದರು. ನಂತರ ಈ ಮೊತ್ತವನ್ನು 20 ಲಕ್ಷ ರೂ.ಗೆ ಇಳಿಕೆ ಮಾಡಲಾಗಿತ್ತು ಎಂದು ಪುನೀತ್ ಆರೋಪಿಸಿದ್ದಾರೆ. ಅಲ್ಲದೇ ಲಂಚ ಕೇಳಿದ ಆರೋಪ ಸಂಬಂಧ ಅಬಕಾರಿ ಡಿಸಿ ರವಿಶಂಕರ್ ಹಾಗೂ ಇನ್ಸ್​ಪೆಕ್ಟರ್ ಶಿವಶಂಕರ್ ವಿರುದ್ಧ ಪುನೀತ್ ಲೋಕಾಯುಕ್ತಕ್ಕೆ ಗುರುವಾರ ದೂರು ನೀಡಿದ್ದರು. ಜತೆಗೆ, ಆಡಿಯೋ ಸಾಕ್ಷ್ಯವನ್ನೂ ಸಲ್ಲಿಸಿದ್ದರು.

Comments (0)

Your email address will not be published. Required fields are marked *

Back to top button